ಬೆಂಗಳೂರು:ಮಳೆ ನೀರು ನುಗ್ಗಿ ಸ್ಥಗಿತಗೊಂಡಿದ್ದ ಕಾವೇರಿ ನೀರು ಸರಬರಾಜು ಮಾಡುವ ಪಂಪ್ ಹೌಸ್ಗಳು ದುರಸ್ತಿಯಾಗಿದ್ದು, ಬುಧವಾರ ಬೆಳಗ್ಗೆಯಿಂದಲೇ ಕಾರ್ಯನಿರ್ವಹಣೆ ಮಾಡಲಿವೆ. ಮಹಾನಗರದ ನಾಗರಿಕರು ಕುಡಿಯುವ ನೀರು ಪೂರೈಕೆ ವಿಷಯದಲ್ಲಿ ಆತಂಕಪಡಬೇಕಾಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಆರ್ ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ನೀರು ನುಗ್ಗಿದ್ದರಿಂದ ಎರಡು ಪಂಪ್ ಹೌಸ್ ಸ್ಥಗಿತವಾಗಿತ್ತು. 550 ಎಂಎಲ್ಡಿ ಸಾಮರ್ಥ್ಯದ ನಾಲ್ಕನೇ ಹಂತದ ನೀರು ಘಟಕ ಈಗ ಪ್ರಾರಂಭವಾಗಿದೆ. 330 ಎಂಎಲ್ಡಿ ಪಂಪ್ ಕೂಡ ಆದಷ್ಟು ಬೇಗ ಸರಿಯಾಗಲಿದ್ದು, ಬುಧವಾರ ಬೆಳಗ್ಗೆಯಿಂದ ನೀರು ಪೂರೈಕೆ ಮಾಡಲಿದೆ. ಹಾಗಾಗಿ ನಗರದ ನಾಗರಿಕರು ಯಾವುದೇ ರೀತಿಯಲ್ಲಿ ಆತಂಕಪಡಬೇಕಿಲ್ಲ. ಇಷ್ಟು ತ್ವರಿತವಾಗಿ ದುರಸ್ತಿ ಮಾಡಿದ ಜಲಮಂಡಳಿ, ಬಿಬಿಎಂಪಿ ಅಧಿಕಾರಿ, ಸಿಬ್ಬಂದಿ ಸೇರಿ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.