ಬೆಂಗಳೂರು: ಕೆಲಸ ಕೊಡಿಸುವ ಸೋಗಿನಲ್ಲಿ ಬೆಂಗಳೂರು ವಿವಿ ಕುಲಪತಿ ಹಾಗೂ ಕುಲಸಚಿವರ ನಕಲಿ ಸಹಿ ಹಾಗೂ ಲೆಟರ್ ಹೆಡ್ ಬಳಸಿ ಲಕ್ಷಾಂತರ ರುಪಾಯಿ ವಂಚನೆ ಮಾಡಿದ್ದು, ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಕಲಿ ಸಹಿ ಬಳಕೆ: ಬೆಂಗಳೂರು ವಿವಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಪಂಗನಾಮ - ನಕಲಿ ಸಹಿ ಹಾಗೂ ಲೆಟರ್ ಹೆಡ್ ಪ್ರಕರಣ
ಅಪರಿಚಿತ ವ್ಯಕ್ತಿಗಳು ಬೆಂಗಳೂರು ವಿವಿ ಕುಲಪತಿ ಹಾಗೂ ಕುಲಸಚಿವರ ನಕಲಿ ಸಹಿ ಹಾಗೂ ಲೆಟರ್ ಹೆಡ್ ಬಳಸಿ ಉದ್ಯೋಗಾಂಕ್ಷಿಗಳಿಗೆ ವಂಚನೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ನೇರ ನೇಮಕಾತಿ ಮೂಲಕ ಬೆಂಗಳೂರು ವಿವಿಯಲ್ಲಿ ಗ್ರೇಡ್-1 ಅಧಿಕಾರಿಗಳ ಹುದ್ದೆ ಕೊಡಿಸುವುದಾಗಿ ಆರೋಪಿಗಳು ಆಮಿಷವೊಡ್ಡಿದ್ದರು. ಅಧಿಸೂಚನೆ ಹೊರಡಿಸುವ ಮೊದಲೇ 10 ಜನರಿಗೆ ಗ್ರೇಡ್-1 ಹುದ್ದೆ ಕೊಡಿಸುವುದಾಗಿ ಹೇಳಿದ್ದ ಮಧ್ಯವರ್ತಿಗಳು, ಇದೀಗ ಕುಲಪತಿ ಹಾಗೂ ಕುಲಸಚಿವರ ನಕಲಿ ಸಹಿ ಇರುವ ಆದೇಶ ಪತ್ರಗಳನ್ನು ಉದ್ಯೋಗಾಂಕ್ಷಿಗಳಿಗೆ ನೀಡಿ ತಲೆಮರೆಸಿಕೊಂಡಿದ್ದಾರೆ.
ಕೆಲಸ ಸಿಕ್ಕಿದೆ ಎಂದು ನಂಬಿ ನೇಮಕಾತಿ ಆದೇಶ ಪತ್ರ ಹಿಡಿದು ಕೆಲಸದ ಸ್ಥಳಕ್ಕೆ ಹೋದಾಗ ತಾವು ವಂಚನೆಗೊಳಗಾಗಿದ್ದೇವೆ ತಿಳಿದುಬಂದಿದೆ. ಈ ಸಂಬಂಧ ವಂಚನೆಗೊಳಗಾದ ಅಭ್ಯರ್ಥಿಗಳು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.