ಬೆಂಗಳೂರು: ಡಿ.ಜಿ.ಹಳ್ಳಿ ಹಾಗೂ ಕೆ.ಜಿ.ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧ ಮುನೇಶ್ವರ ನಗರ ವಾರ್ಡ್ ಕಾರ್ಪೋರೇಟರ್ ನಾಜೀಯಾ ಪತಿ ಸೈಯದ್ ನಾಸಿರುಲ್ಲಾ ಅವರನ್ನು ಸೋಮವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಸೂಚಿಸಿದೆ.
ಬೆಂಗಳೂರು ಗಲಭೆ ಪ್ರಕರಣ: ಕಾರ್ಪೋರೇಟರ್ ಪತಿಯನ್ನು ವಿಚಾರಣೆಗೊಳಪಡಿಸಿದ ಸಿಸಿಬಿ
ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಪೋರೇಟರ್ ನಾಜೀಯಾ ಪತಿ ಸೈಯದ್ಯನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿ, ಮತ್ತೇ ಸೋಮವಾರ ಹಾಜರಾಗುವಂತೆ ಸೂಚಿಸಿದ್ದಾರೆ.
ಗಲಭೆಗೆ ಕುಮ್ಮಕ್ಕು ನೀಡಿದ ಆರೋಪದಡಿ ಸೈಯದ್ ಅವರನ್ನು ವಿಚಾರಣೆಗೆ ಒಳಪಡಿಸಲು ನೋಟಿಸ್ ನೀಡಲಾಗಿತ್ತು. ಇದರಂತೆ ಹಾಜರಾಗಿ ಸಯ್ಯದ್ ತನಿಖಾಧಿಕಾರಿಗಳ ವಿಚಾರಣೆ ಎದುರಿಸಿದರು. ಪ್ರಕರಣದಲ್ಲಿ ಬಂಧಿತರಾಗಿರುವ ಎಸ್ಡಿಪಿಐ ಮುಖಂಡ ಮುಜಾಮಿಲ್ ಸೇರಿದಂತೆ ಡಿ.ಜೆ.ಹಳ್ಳಿಯ ಬಹುತೇಕ ನಾಯಕರು ನನಗೆ ಪರಿಚಯವಿದೆ. ಆದರೆ, ಗಲಭೆಯಲ್ಲಿ ನಾನು ಭಾಗಿಯಾಗಿಲ್ಲ, ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸೈಯದ್ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.
ಸಿಸಿಬಿ ತನಿಖಾಧಿಕಾರಿಗಳು ಸೈಯದ್ ನಾಸಿರುಲ್ಲಾನ ಮೊಬೈಲ್ ವಶಕ್ಕೆ ಪಡೆದು, ಹೆಚ್ಚಿನ ಮಾಹಿತಿಗಾಗಿ ಟೆಕ್ನಿಕಲ್ ಸೆಂಟರ್ಗೆ ಕಳುಹಿಸಿದ್ದಾರೆ. ಸಿಸಿಬಿ ಪೊಲೀಸರು ಇನ್ನೂ ಕೆಲವೊಂದು ಮಹತ್ವದ ಹೇಳಿಕೆಗಳು ಮತ್ತು ಮೊಬೈಲ್ನಲ್ಲಿ ಅಳಿಸಿರಬಹುದಾದ ಮಾಹಿತಿ ಕುರಿತು ವಿಚಾರಣೆ ಬಾಕಿ ಇದೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೆ ಸೋಮವಾರ 10 ಗಂಟೆಗೆ ವಿಚಾರಣೆ ಬರುವಂತೆ ತನಿಖಾಧಿಕಾರಿಗಳು ಸೂಚಿಸಿದರು.