ಕರ್ನಾಟಕ

karnataka

ETV Bharat / state

ರಾಜ್ಯಾದ್ಯಂತ ವೈಕುಂಠ ಏಕಾದಶಿ ಸಂಭ್ರಮದಿಂದ ಆಚರಣೆ: ಇಸ್ಕಾನ್​ ದೇಗುಲಗಳಲ್ಲಿ ಮನಸೆಳೆದ ದೇವರ ವಿಶೇಷ ಪೂಜೆ - ಶ್ರೀಕೃಷ್ಣನ 1 ಲಕ್ಷ ನಾಮಸ್ಮರಣೆ

ರಾಜ್ಯಾದ್ಯಂತ ಇಂದು ವಿಷ್ಣುವಿನ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಸಂಭ್ರಮದಿಂದ ಆಚರಿಸಲಾಯಿತು. ಬೆಂಗಳೂರಿನ ಹರೇ ಕೃಷ್ಣ ಗಿರಿ, ವೈಕುಂಠ ಗಿರಿ, ಹುಬ್ಬಳ್ಳಿ ಇಸ್ಕಾನ್ ದೇಗುಲದಲ್ಲಿ ವೈಕುಂಠ ಏಕಾದಶಿ ಸಂಭ್ರಮದಿಂದ ಜರುಗಿತು.

Vaikuntha Ekadashi is celebrated
ಬೆಂಗಳೂರಿನ ಇಸ್ಕಾನ್ ದೇಗುಲಗಳಲ್ಲಿ ವೈಕುಂಠ ಏಕಾದಶಿ ಸಂಭ್ರಮದಿಂದ ಆಚರಣೆ

By ETV Bharat Karnataka Team

Published : Dec 23, 2023, 9:02 PM IST

ಬೆಂಗಳೂರು:ರಾಜ್ಯಾದ್ಯಂತ ವಿಷ್ಣುವಿನ ದೇವಾಲಯಗಳಲ್ಲಿ ಇಂದು ವೈಕುಂಠ ಏಕಾದಶಿ ಸಂಭ್ರಮದಿಂದ ಆಚರಿಸಲಾಯಿತು. ಬೆಂಗಳೂರಿನ ರಾಜಾಜಿನಗರದ ಹರೇ ಕೃಷ್ಣ ಗಿರಿ, ಕನಕಪುರ ರಸ್ತೆ ವಸಂತಪುರದ ವೈಕುಂಠ ಗಿರಿ ಇಸ್ಕಾನ್ ದೇಗುಲದಲ್ಲಿ ವೈಕುಂಠ ಏಕಾದಶಿ ಆಚರಿಸಲಾಯಿತು. 2.5 ಲಕ್ಷಕ್ಕೂ ಹೆಚ್ಚು ಭಕ್ತರು ಇಸ್ಕಾನ್ ದೇಗುಲದ ಶ್ರೀನಿವಾಸ ಗೋವಿಂದ ದೇವರ ದರ್ಶನ ಪಡೆದು ಪುನೀತರಾದರು.

ವೈಕುಂಠ ಏಕಾದಶಿ ದಿನ ಇಂದು ಬೆಳಗ್ಗೆ ಹರೇ ಕೃಷ್ಣ ಗಿರಿ, ವೈಕುಂಠ ಗಿರಿ ದೇವಾಲಯದ ಶ್ರೀನಿವಾಸ ಗೋವಿಂದ ದೇವರಿಗೆ ಪಂಚಾಮೃತ, ಪಂಚಗವ್ಯ ಹಣ್ಣಿನ ರಸಗಳು ಮತ್ತು ಸುಗಂಧಭರಿತ ಜಲದಿಂದ ಶ್ರೀನಿವಾಸ ಗೋವಿಂದ ದೇವರಿಗೆ ಮಹಾ ಅಭಿಷೇಕ ಜರುಗಿದವು. ಇಸ್ಕಾನ್ ದೇವಾಲಯಗಳನ್ನು ಹೂವಿನಿಂದ ಅಲಂಕರಿಸಲಾಗಿತು.

ಹರೇ ಕೃಷ್ಣ ಗಿರಿ ದೇಗುಲದ ಶ್ರೀ ರಾಧಾಕೃಷ್ಣಚಂದ್ರರ ಉತ್ಸವ ಮೂರ್ತಿಯನ್ನು ಅನಂತಶೇಷನ ಮೇಲೆ ಕುಳಿತಿರುವ ಲಕ್ಷ್ಮೀ ನಾರಾಯಣಗೆ ವಿಶೇಷ ಅಲಂಕಾರ ಮಾಡಲಾಗಿತು. ವೈಕುಂಠ ಗಿರಿ ದೇಗುಲದ ಶ್ರೀ ರಾಜಗೋಪಾಲ, ರುಕ್ಕಿಣಿ ಮತ್ತು ಸತ್ಯಭಾಮೆಯರನ್ನು ವೈಕುಂಠ ದ್ವಾರದ ಮೇಲೆ ಅನಂತಶೇಷನ ಮೇಲೆ ಕುಳಿತಿರುವ ನಾರಾಯಣ, ಶ್ರೀ-ದೇವಿ ಮತ್ತು ಭೂದೇವಿ ಅಲಂಕಾರದಲ್ಲಿ ಅಲಂಕಾರ ಮಾಡಲಾಗಿತು. ಭಕ್ತರ ಪ್ರವೇಶಕ್ಕೆ ವೈಕುಂಠ ದ್ವಾರಗಳನ್ನು ತೆರೆಯಲಾಗಿತು.

ಕಲ್ಯಾಣೋತ್ಸವ:ವೈಕುಂಠ ಏಕಾದಶಿ ಶುಭದಿನಂದು ಶ್ರೀ ಕೃಷ್ಣ ಮತ್ತು ದುಕ್ಕಿಣಿ ಸತ್ಯಭಾಮೆಯರ ಭವ್ಯ ಕಲ್ಯಾಣೋತ್ಸವ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ರಾಜಾಧಿರಾಜ ಗೋವಿಂದ ದೇವಸ್ಥಾನದಲ್ಲಿ ರಾಜಲಕ್ಷ್ಮಿ ಪದ್ಮಾವತಿ ದೇವಿಗೆ ಕುಂಕುಮಾರ್ಚನೆ ಸೇವೆ ಮಾಡಲಾಯಿತು.

ದಿನವಿಡೀ ಎರಡೂ ದೇವಾಲಯಗಳಲ್ಲಿ ಶ್ರೀಕೃಷ್ಣನ 1 ಲಕ್ಷ ನಾಮಸ್ಮರಣೆಯೊಂದಿಗೆ ವಿವಿಧ ಭಕ್ತರು ಲಕ್ಷಾರ್ಚನೆ ಸೇವೆಯನ್ನು ಸಲ್ಲಿಸಿದರು. ರಾತ್ರಿ 10 ಗಂಟೆಯವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿತು. ಎರಡೂ ದೇವಸ್ಥಾನಗಳಲ್ಲಿ ಭಕ್ತರಿಗೆ ಲಡ್ಡುಗಳೊಂದಿಗೆ ಬರ್ಫಿ, ಮೈಸೂರು ಪಾಕ್, ಹೋಳಿಗೆಯಂತಹ ಸಾಂಪ್ರದಾಯಿಕ ಸಿಹಿ ತಿಂಡಿಗಳು ಮತ್ತು ಮುರುಕು ಹಾಗೂ ನಿಪ್ಪಟ್ಟುಗಳಂತಹ ಖಾರಗಳು ಇತ್ಯಾದಿ ಖಾದ್ಯ ತಯಾರಿಸಿ ವಿತರಿಸಲಾಯಿತು.

ಸಂಜೆ ಇಸ್ಕಾನ್ ಬೆಂಗಳೂರಿನ ಎರಡೂ ದೇಗುಲಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತು. ಪುರಂದರದಾಸರ ಸುಂದರವಾದ ಭಜನೆಗಳ ಸಂಗೀತ ಕಚೇರಿಯನ್ನು ಕುಮಾರ ರಘು ಮಣಿಕಂಠನ್ ಮತ್ತು ಅಮೆರಿಕದ ಕಿರಣ್ ಮತ್ತು ನೀವಿ ಅವಳಿ ಸಹೋದರಿಯರು ಸುಶ್ರಾವ್ಯ ಭಜನೆಗಳನ್ನು ಹಾಡಿದರು. ದಿನವಿಡೀ ನಾನಾ ಕಲಾವಿದರು ಸಂಕೀರ್ತನೆ ಸಂಗೀತ ಸೇವೆಯನ್ನು ಸಲ್ಲಿಸಿದರು. ಇಸ್ಕಾನ್ ಬೆಂಗಳೂರು ಅಧ್ಯಕ್ಷ ಮಧು ಷಂಡಿತ್ ದಾಸರ ಅಧ್ಯಕ್ಷತೆಯಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಿದವು.


ಹುಬ್ಬಳಿ ಇಸ್ಕಾನ್ ದೇಗುಲದಲ್ಲಿ ವಿವಿಧ ಪೂಜೆ ;ಹುಬ್ಬಳ್ಳಿ ಇಸ್ಕಾನ್ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ವೈಕುಂಠ ಏಕಾದಶಿ ಹಿನ್ನೆಲೆ ಇಸ್ಕಾನ್ ದೇವಾಲಯವನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ಸಾವಿರಾರೂ ಭಕ್ತರು ದೇವರು ದರ್ಶನ ಪಡೆದು ಪುನೀತರಾದರು. ಸಂಸ್ಥೆಯ ಅಧ್ಯಕ್ಷ ರಾಜೀವ್ ಲೋಚನ್ ದಾಸ್ ಹಾಗೂ ಸರ್ವಭಕ್ತರ ಸಮ್ಮುಖದಲ್ಲಿ ವಿಶೇಷ ಪೂಜೆ, ಭಜನೆ, ನೃತ್ಯ ಹಾಗೂ ಶ್ರೀಕೃಷ್ಣನ ಜಪ ನಡೆಸಲಾಯಿತು.

ನೂರಾರು ಭಕ್ತರು ಹೂವಿನ ಅಭಿಷೇಕ ಮಾಡುವ ಮುಖಾಂತರ ವೈಕುಂಠ ಏಕಾದಶಿ ಆಚರಿಸಿದರು. ಇದೇ ವೇಳೆ, ರಾಜೀವ್ ಲೋಚನ್ ದಾಸ್ ಅವರು ಏಕಾದಶಿ ಮಹತ್ವ ತಿಳಿಸಿದರು. ಸಂಜೆ ಭಗವಂತನನ್ನು ಸ್ತುತಿಸುವ ನೃತ್ಯ, ನಾಟಕ ಮತ್ತು ಸಂಗೀತದಂತಹ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇದನ್ನೂಓದಿ:ಅರಮನೆ ಫಲಪುಷ್ಪ ಪ್ರದರ್ಶನದಲ್ಲಿ ನೋಡುಗರ ಮನ ಸೆಳೆಯುತ್ತಿರುವ ವಿವಿಧ ಆಕೃತಿಗಳು

ABOUT THE AUTHOR

...view details