ಬೆಂಗಳೂರು: ನವೋದ್ಯಮಗಳ ಬೆಳವಣಿಗೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮತ್ತಷ್ಟು ರಚನಾತ್ಮಕ ನೆರವು ನೀಡುವ ಉದ್ದೇಶದ ಬೂಸ್ಟರ್ ಕಿಟ್ ಉಪಕ್ರಮಕ್ಕೆ ಐಟಿ-ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಬೆಂಗಳೂರು ತಂತ್ರಜ್ಞಾನ ಸಮಾವೇಶದಲ್ಲಿ ಚಾಲನೆ ನೀಡಿದರು.
ಒಟ್ಟು ಒಂಬತ್ತು ಸಂಸ್ಥೆಗಳ ಜತೆಗೆ ಕರ್ನಾಟಕ ಇನ್ನೋವೇಶನ್ ಮತ್ತು ಟೆಕ್ನಾಲಜಿ ಸೊಸೈಟಿ (ಕಿಟ್ಸ್) ವ್ಯವಸ್ಥಾಪಕ ನಿರ್ದೇಶಕಿ ಮೀನಾ ನಾಗರಾಜ ಅವರು ಸರ್ಕಾರದ ಪರವಾಗಿ ಸಹಿ ಹಾಕಿದರು. ಈ ಸಂಬಂಧವಾಗಿ ಗೂಗಲ್, ಪೇಟಿಎಂ, ಎಚ್‌ಡಿಎಫ್‌ಸಿ, ರೇಜರ್ ಪೇ, ಮೈಕ್ರೋಸಾಫ್ಟ್, ಗೆಯ್ನ್, ದಯಾನಂದ ಸಾಗರ್ ಉದ್ಯಮಶೀಲತಾ ಮತ್ತು ವಾಣಿಜ್ಯ ಪರಿಪೋಷಣಾ ಕೇಂದ್ರ, ಎಡಬ್ಲ್ಯುಎಸ್ ಮತ್ತು ಸ್ಟ್ರಾಂಗ್‌ಹರ್ ವೆಂಚರ್ಸ್ ಜತೆಗೆ ಐಟಿ-ಬಿಟಿ ಇಲಾಖೆ ಮತ್ತು ಕರ್ನಾಟಕ ಇನ್ನೋವೇಶನ್ ಮತ್ತು ಟೆಕ್ನಾಲಜಿ ಸೊಸೈಟಿಗಳು (ಕಿಟ್ಸ್) ಸಚಿವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಅಂಕಿತ ಹಾಕಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, 'ಕರ್ನಾಟಕ ಸ್ಟಾರ್ಟಪ್ ಸೆಲ್‌ನಲ್ಲಿ ನೋಂದಣಿ ಮಾಡಿಕೊಂಡಿರುವ ನವೋದ್ಯಮಗಳಿಗೆ ಇನ್ಮುಂದೆ ಎಚ್‌ಡಿಎಫ್‌ಸಿ, ಪೇಟಿಎಂ ಮತ್ತು ರೇಜರ್ಪೇ ಸಂಸ್ಥೆಗಳ ಮೂಲಕ ಬ್ಯಾಂಕಿಂಗ್ ಹಾಗೂ ಫಿನ್- ಟೆಕ್ ಸೇವೆಗಳು ಸಿಗಲಿವೆ. ಜತೆಗೆ ಸ್ಮಾರ್ಟ್-ಅಪ್ ಉಪಕ್ರಮದಡಿ ಹೆಚ್ಚಿನ ಮಾರುಕಟ್ಟೆ ಪ್ರಸ್ತುತಿ, ಬೇಡಿಕೆ ಸೃಷ್ಟಿ ಮತ್ತು ವ್ಯಾಪಾರ - ವಹಿವಾಟುಗಳ ಸುಸ್ಥಿರ ಬೆಳವಣಿಗೆ ಸಾಧ್ಯವಾಗಲಿದೆ' ಎಂದರು.