ಕರ್ನಾಟಕ

karnataka

ETV Bharat / state

ನವೆಂಬರ್‌ 18 ರಿಂದ 3 ದಿನಗಳ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ.... ಸ್ಥಾನ ಉಳಿಸಿಕೊಳ್ಳಲು ಮಾಸ್ಟರ್​ ಪ್ಲಾನ್​ - ತಂತ್ರಜ್ಞಾನ ಶೃಂಗ ಸಭೆ ಅರಮನೆ ಮೈದಾನ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನವೆಂಬರ್‌ 18ರಿಂದ 3 ದಿನಗಳ ತಂತ್ರಜ್ಞಾನ ಶೃಂಗಸಭೆ ಅರಮನೆ ಮೈದಾನದಲ್ಲಿ ನಡೆಯಲಿದೆ.

ಶೃಂಗಸಭೆ

By

Published : Nov 12, 2019, 6:03 PM IST

ಬೆಂಗಳೂರು:ನವೆಂಬರ್‌ 18ರಿಂದ 3 ದಿನಗಳ ತಂತ್ರಜ್ಞಾನ ಶೃಂಗಸಭೆ ಅರಮನೆ ಮೈದಾನದಲ್ಲಿ ನಡೆಯಲಿದೆ. ಈ ಕುರಿತು ಇಂದು ನಡೆದ ಟೆಕ್​ ಸಮ್ಮಿಟ್​​​ನಲ್ಲಿ ಡಿಸಿಎಂ ಅಶ್ವತ್ಥ್​​​ ನಾರಾಯಣ್​​​ ಭಾಗವಹಿಸಿದರು. ​​

"ಬೆಂಗಳೂರು ತಂತ್ರಜ್ಞಾನ ಶೃಂಗಸಭೆ ಕರ್ನಾಟಕ ಸರ್ಕಾರದ ಐಟಿ, ಬಿಟಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಅತ್ಯಂತ ಪ್ರಮುಖ ಕಾರ್ಯಕ್ರಮವಾಗಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿದೆ. ಉದ್ಯಮದ ಹಿರಿಯ ನಾಯಕರನ್ನೊಳಗೊಂಡ ವಿಷನ್ ಗ್ರೂಪ್‌ ನಮ್ಮೊಂದಿಗಿದೆ. ಹಿಂದೆಂದಿಗಿಂತಲೂ ಈ ಶೃಂಗಸಭೆ ವಿಭಿನ್ನ ಹಾಗೂ ದೊಡ್ಡ ಮಟ್ಟದಲ್ಲಿ ನಡೆಯಲಿದ್ದು, ಐಟಿ- ಬಿಟಿ ಸೇರಿದಂತೆ ಹೊಸ ಮತ್ತು ನವೀನ ತಂತ್ರಜ್ಞಾನ, ಅನ್ವೇಷಣೆಗಳ ಕುರಿತ ಚರ್ಚೆಗೆ ಸೂಕ್ತ ವೇದಿಕೆಯಾಗಲಿದೆ. ಈ ಬಾರಿ 20 ರಾಷ್ಟ್ರಗಳ ಅತಿ ದೊಡ್ಡ ಅಂತಾರಾಷ್ಟ್ರೀಯ ಸಮೂಹ ಸಭೆಯಲ್ಲಿ ಭಾಗಿಯಾಗಲಿದೆ. ಸಭೆಯಲ್ಲಿ ಹಲವು ಅಂತಾರಾಷ್ಟ್ರೀಯ ಒಪ್ಪಂದಗಳು ಏರ್ಪಡುವ ನಿರೀಕ್ಷೆಯೂ ಇದೆ," ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ್​​​​ ನಾರಾಯಣ ತಿಳಿಸಿದರು.

ರೊಬೋಟಿಕ್‌ ಪ್ರೀಮಿಯರ್‌ ಲೀಗ್‌:
"ಆರ್‌2-ರೋಬೊಟಿಕ್‌ ಪ್ರೀಮಿರ್‌ ಲೀಗ್‌ ಈ ವರ್ಷದ ಹೊಸ ಸೇರ್ಪಡೆ. ದೇಶದ ಅತಿ ದೊಡ್ಡ ರೊಬಾಟಿಕ್ಸ್‌ ಸ್ಪರ್ಧೆಯಲ್ಲಿ ರಾಜ್ಯದ ಎಲ್ಲ ಭಾಗಗಳ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ. ಇತರ ವಿದ್ಯಾರ್ಥಿಗಳ ಜತೆ ವಿಚಾರ ವಿನಿಮಯಕ್ಕೆ ವೇದಿಕೆ ಕಲ್ಪಿಸುವುದಲ್ಲದೇ, ಖ್ಯಾತ ಶಿಕ್ಷಣ ತಜ್ಞರು ಹಾಗೂ ಉದ್ದಿಮೆಯ ಪರಿಣಿತರಿಂದ ಮಾರ್ಗದರ್ಶನ ಪಡೆಯಲು ಸಭೆ ಅಪೂರ್ವ ಅವಕಾಶ ಒದಗಿಸುವುದು,'' ಎಂದು ತಿಳಿಸಿದ್ದಾರೆ.

3 ದಿನಗಳ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ

ಹೊಸ ಪ್ರಶಸ್ತಿ:
"ಎಸ್‌ಟಿಪಿಐ ಐಟಿ ಎಕ್ಸ್‌ಪೋರ್ಟ್‌ ಅವಾರ್ಡ್‌ ಹಾಗೂ ಸ್ಮಾರ್ಟ್‌ ಬಯೋ ಅವಾರ್ಡ್‌ ಅಲ್ಲದೇ, ಉದ್ದಿಮೆ ಪ್ರಶಸ್ತಿ ವಿಭಾಗಕ್ಕೆ ಈ ಬಾರಿ ಹೊಸದಾಗಿ 'ಬೆಂಗಳೂರು ಇಂಪ್ಯಾಕ್ಟ್‌ ಅವಾರ್ಡ್‌' ಸೇರಲಿದೆ. ಉದ್ಯಮದಲ್ಲಿ ಯಶಸ್ಸು ಕಂಡಿರುವ ಸಾಧಕರು ಜಾಗತಿಕ ನಕ್ಷೆಯಲ್ಲಿ ಬೆಂಗಳೂರಿಗೆ ವಿಶಿಷ್ಟ ಸ್ಥಾನ ತಂದುಕೊಟ್ಟಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ, ಉತ್ತೇಜಿಸುವ ಉದ್ದೇಶದಿಂದ ಪ್ರಪ್ರಥಮ ಬಾರಿಗೆ 'ಬೆಂಗಳೂರು ಇಂಪ್ಯಾಕ್ಟ್‌ ಅವಾರ್ಡ್‌' ನೀಡುತ್ತಿದ್ದೇವೆ," ಎಂದು ವಿವರಿಸಿದರು.

ಇಂಡಿಯಾ-ಬಯೋ:
ಬೆಂಗಳೂರು ಟೆಕ್‌ ಶೃಂಗ ಸಭೆಯ "ಇಂಡಿಯಾ ಬಯೋ'- "ಸ್ಮಾರ್ಟ್‌ ಬಯೋ ಪಿಚ್‌ಟೂನಿಂಗ್ ಸೆಷನ್‌ಗೆ ಸಾಕ್ಷಿ ಆಗಲಿದೆ. ಬಯೋ ಸ್ಟಾರ್ಟ್‌ಅಪ್‌ಗಳಿಗಾಗಿ ಆಯೋಜಿಸಿರುವ ಮೊದಲ ಸಭೆ ಇದಾಗಿದ್ದು, 20ಕ್ಕೂ ಹೆಚ್ಚು ಬಯೋಟೆಕ್‌ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಖಚಿತಪಡಿಸಿವೆ. ಬಯೋಟೆಕ್‌, ಮೆಡ್‌ಟೆಕ್‌, ಅಗ್ರಿಟೆಕ್‌ ಹಾಗೂ ಡಯಾಗ್ನೆಸ್ಟಿಕ್‌ ವಲಯದ ನವೋದ್ಯಮಗಳಿಗೆ ಬೆಂಬಲ ನೀಡುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶ," ಎಂದು ಸಚಿವರು ತಿಳಿಸಿದರು.

ಕನ್ನಡಿಗರಿಗೆ ಆದ್ಯತೆ:
"ಅಸಾಧಾರಣ ಬುದ್ಧಿವಂತಿಕೆ ಹೊಂದಿರುವ ಶಾಲಾ ಮಕ್ಕಳು ಹಾಗೂ ಅವರಿಗೆ ಸೂಕ್ತ ಮಾರ್ಗದರ್ಶ ಒದಗಿಸಬಲ್ಲ ಮಾರ್ಗದರ್ಶಕರು ಅಥವಾ ಸಂಸ್ಥೆಗಳನ್ನು ಒಂದುಗೂಡಿಸುವ ಕಾರ್ಯತಂತ್ರವನ್ನು ಗುರುತಿಸುವ ಪ್ರಕ್ರಿಯೆ ನಡೆದಿದೆ. ತಂತ್ರಜ್ಞಾನ ವಲಯದಲ್ಲಿ ಕನ್ನಡಿಗರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುವುದೇ ಈ ಯೋಜನೆಯ ಮೂಲ ಉದ್ದೇಶ," ಎಂದು ಐಟಿ ಬಿಟಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ತಿಳಿಸಿದರು.

ಬೆಂಗಳೂರಿನ ಹಿರಿಮೆ:
"ಅನ್ವೇಷಣೆ, ತಂತ್ರಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ನಮ್ಮ ರಾಜ್ಯ ಅಗ್ರ ಸ್ಥಾನ ಪಡೆದಿದೆ. ಬೆಂಗಳೂರು ವಿಶ್ವದ 4ನೇ ಅತಿ ದೊಡ್ಡ ತಾಂತ್ರಿಕ ಕ್ಲಸ್ಟರ್‌. ಜಾಗತಿಕ ಮಟ್ಟದ ತಾಂತ್ರಿಕ ಕೇಂದ್ರ ಎಂಬ ಹೆಗ್ಗೆಳಿಕೆಯೂ ನಗರಕ್ಕೆ ಇದೆ. ನ್ಯೂಯಾರ್ಕ್‌, ಟೊಕಿಯೋ, ಲಂಡನ್‌, ಬೀಜಿಂಗ್‌, ಟೆಲ್‌ ಅವಿವ್‌ ಮುಂತಾದ ನಗರಗಳ ಸಾಲಿನಲ್ಲಿ ಬೆಂಗಳೂರಿಗೂ ಸ್ಥಾನ ಇದೆ ಎಂಬುದು ಹೆಮ್ಮೆಯ ಸಂಗತಿ ಎಂದರು.

"ಕೌಶಲ್ಯ ವರ್ಧನೆ, ನವೋದ್ಯಮಕ್ಕೆ ಪೂರಕ ಬೆಂಬಲ, ಜಾಗತಿಕ ಒಪ್ಪಂದ, ಎರಡನೇ ಹಂತದ ನಗರಗಳ ಅಭಿವೃದ್ಧಿಗೆ ಆದ್ಯತೆ, ಆವಿಷ್ಕಾರಗಳಿಗೆ ಪೂರಕ ನಿಯಮಾವಳಿಗಳ ರೂಪಿಸುವುದು ಸೇರಿಂದತೆ ಅನ್ವೇಷಣಾ ಕ್ಷೇತ್ರದಲ್ಲಿ ಕರ್ನಾಟಕ ರಾಷ್ಟ್ರದಲ್ಲಿ ಅಗ್ರ ಸ್ಥಾನ ಕಾಯ್ದುಕೊಳ್ಳುವ ಜತೆಗೆ ಜಾಗತಿಕ ಆರ್ಥಿಕತೆಯಲ್ಲಿ ತನ್ನ ಸ್ಥಾನ ಉತ್ತಮಪಡಿಸಿಕೊಳ್ಳಲು ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸರ್ಕಾರ ಎಲ್ಲ ಅಗತ್ಯ ಕ್ರಮ ಕೈಗೊಂಡಿದೆ,"ಎಂದು ಅವರು ತಿಳಿಸಿದರು.

ABOUT THE AUTHOR

...view details