ಬೆಂಗಳೂರು: ರಾಜ್ಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ವ್ಯವಸ್ಥಿತವಾಗಿ ಬೆಳೆಸಲು 'ಕರ್ನಾಟಕ ರಾಜ್ಯ ಸಂಶೋಧನಾ ಪ್ರತಿಷ್ಠಾನ'ವನ್ನು ಆರಂಭಿಸಲಾಗುವುದು ಎಂದು ರಾಜ್ಯ ಸರಕಾರ ಬುಧವಾರ ಆರಂಭವಾದ 25ನೇ ವರ್ಷದ ಬೆಂಗಳೂರು ತಂತ್ರಜ್ಞಾನ ಸಮಾವೇಶದಲ್ಲಿ ಹೇಳಿದೆ. ಇದರ ಜೊತೆಗೆ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತಾ ನೀತಿಯಲ್ಲಿ ಇದರಲ್ಲಿ ಹೇಳಲಾಗಿದೆ.
ನೀತಿಯಲ್ಲಿರುವ ಗುರಿಗಳನ್ನು ತಲುಪಲು ಸರಕಾರದ ಪ್ರತಿಯೊಂದು ಇಲಾಖೆಯೂ ಸಂಶೋಧನೆ ಮತ್ತು ಅಭಿವೃದ್ಧಿಗೆ ವರ್ಷದಿಂದ ವರ್ಷಕ್ಕೆ ಶೇಕಡಾ 0.1ರಷ್ಟು ಹಣವನ್ನು ಏರಿಸಲಿವೆ. ಈ ಮೂಲಕ ಮುಂದಿನ ಐದು ವರ್ಷಗಳಲ್ಲಿ ರಾಷ್ಟ್ರೀಯ ಜಿಡಿಪಿಯ ಶೇಕಡಾ 0.7ರಷ್ಟು ಮತ್ತು ರಾಜ್ಯ ಜಿಡಿಪಿಯ ಶೇಕಡಾ 2ರಿಂದ 3ರಷ್ಟು ಹಣವನ್ನು ಈ ಉದ್ದೇಶಕ್ಕೆ ಮೀಸಲಿಡುವಂಥ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದು ನೀತಿಯಲ್ಲಿ ಹೇಳಲಾಗಿದೆ.
ಈ ನೀತಿಯಿಂದ ಪದವೀಧರರು, ಸ್ನಾತಕೋತ್ತರ ಪದವೀಧರರು ಮತ್ತು ಆರಂಭಿಕ ಹಂತದ ಸಂಶೋಧಕರಿಗೆ ಪ್ರೋತ್ಸಾಹ ದೊರೆಯಲಿದೆ. ಅಲ್ಲದೇ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಾರ್ವಜನಿಕ ನಿಧಿ ಇರುವ 'ಮುಕ್ತ ವಿಜ್ಞಾನ ಮತ್ತು ಸಂಶೋಧನೆ' ಉಪಕ್ರಮ ಆರಂಭಿಸಲಾಗುವುದು. ಇದಕ್ಕೆ ಪೂರಕವಾಗಿ ರಾಜ್ಯದ ಹಲವೆಡೆಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಪಾರ್ಕ್‌ಗಳು ಅಸ್ತಿತ್ವಕ್ಕೆ ಬರಲಿವೆ ಎಂದು ಇದರಲ್ಲಿ ವಿವರಿಸಲಾಗಿದೆ.