ಕರ್ನಾಟಕ

karnataka

ETV Bharat / state

ಮುಂಬೈ ಪೊಲೀಸರ ಸೋಗಿನಲ್ಲಿ ಶಿಕ್ಷಕನ ಖಾತೆಗೆ ಕನ್ನ: 32 ಲಕ್ಷ ರೂಪಾಯಿ ಲೂಟಿ ಮಾಡಿದ ವಂಚಕರು - 32 ಲಕ್ಷ ರೂಪಾಯಿ ಲೂಟಿ ಮಾಡಿದ ವಂಚಕರು

ಮುಂಬೈ ಪೊಲೀಸರ ಹೆಸರಿನಲ್ಲಿ ಬೆಂಗಳೂರಿನ ಶಿಕ್ಷಕರೊಬ್ಬರಿಗೆ 32 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಮುಂಬೈ ಪೊಲೀಸರ ಸೋಗಿನಲ್ಲಿ ಶಿಕ್ಷಕನ ಖಾತೆಗೆ ಕನ್ನ
ಮುಂಬೈ ಪೊಲೀಸರ ಸೋಗಿನಲ್ಲಿ ಶಿಕ್ಷಕನ ಖಾತೆಗೆ ಕನ್ನ

By ETV Bharat Karnataka Team

Published : Sep 5, 2023, 2:14 PM IST

Updated : Sep 5, 2023, 2:55 PM IST

ಬೆಂಗಳೂರು:ಶಿಕ್ಷಕರೊಬ್ಬರಿಗೆ ಮುಂಬೈ ಅಪರಾಧ ವಿಭಾಗ ಪೊಲೀಸರ ಸೋಗಿನಲ್ಲಿ ಕರೆ ಮಾಡಿದ್ದ ಸೈಬರ್ ವಂಚಕರು 32.25 ಲಕ್ಷ ರೂಪಾಯಿ ವಂಚಿಸಿರುವ ಪ್ರಕರಣ ಬೆಂಗಳೂರಿನಲ್ಲಿ ವರದಿಯಾಗಿದೆ. 50 ವರ್ಷ ವಯಸ್ಸಿನ ಚತುರ ರಾವ್ ಎಂಬ ಶಿಕ್ಷಕ ನೀಡಿರುವ ದೂರಿನನ್ವಯ ಈಶಾನ್ಯ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶನಿವಾರ ಕೊರಿಯರ್ ಕಂಪನಿಯೊಂದರ ಪ್ರತಿನಿಧಿ ಹೆಸರಿನಲ್ಲಿ ಕರೆ ಮಾಡಿದ್ದ ವ್ಯಕ್ತಿಯೊಬ್ಬ 'ನಿಮ್ಮ ಹೆಸರಿನ ಕೊರಿಯರ್ ಪಾರ್ಸೆಲ್ ಬಂದಿದ್ದು, ಅದರಲ್ಲಿ ನಿಮ್ಮ ಮೊಬೈಲ್ ನಂಬರ್, ಆಧಾರ್ ನಂಬರ್, ಐದು ಪಾಸ್‌ಪೋರ್ಟ್, ಐದು ಕ್ರೆಡಿಟ್ ಕಾರ್ಡ್ಸ್, ಒಂದು ಲ್ಯಾಪ್‌ಟಾಪ್ ಪತ್ತೆಯಾಗಿದೆ. ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಈ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದ್ದ. ನೀವು ವಿಡಿಯೋ ಕಾಲ್​ ಮೂಲಕ ಮಾತನಾಡಬೇಕಾಗುತ್ತದೆ. ಆದ್ದರಿಂದ ವಿಡಿಯೋ ಆ್ಯಪ್ ಡೌನ್‌ಲೋಡ್‌ ಮಾಡಿಕೊಳ್ಳಿ‘ ಎಂದು ಸಲಹೆ ನೀಡಿದ್ದ.

ಅದರಂತೆ ಶಿಕ್ಷಕ ಆ್ಯಪ್​ ಡೌನ್​ಲೋಡ್​ ಮಾಡಿಕೊಂಡಿದ್ದ. ಇದರ ನಂತರ ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸ್ ಸಿಬ್ಬಂದಿಯೆಂದು ಕರೆ ಮಾಡಿದ್ದ ಮತ್ತೋರ್ವ ವ್ಯಕ್ತಿ, 'ಯಾರೋ ನಿಮ್ಮ ಹೆಸರು, ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅದನ್ನು ಪತ್ತೆ ಮಾಡಬೇಕಾದರೆ, ನಿಮ್ಮ ಖಾತೆಯ ಹಣವನ್ನು ವರ್ಗಾಯಿಸಬೇಕು‘ ಎಂದು ಹೇಳಿದ್ದಾನೆ.

ಆರೋಪಿಗಳ ಸಂಚು ಅರಿಯದ ಶಿಕ್ಷಕ ಚತುರ್​ ರಾವ್ ಅವರು ತಮ್ಮ ಎರಡು ಬ್ಯಾಂಕ್ ಖಾತೆಗಳಿಂದ ಹಂತಹಂತವಾಗಿ 32.25 ಲಕ್ಷ ರೂಪಾಯಿಯನ್ನು ವರ್ಗಾಯಿಸಿದ್ದಾರೆ. ಬಳಿಕ ಆರೋಪಿಗಳ ನಂಬರ್​ಗೆ ಕರೆ ಮಾಡಿದಾಗ ಸಂಪರ್ಕ ಸಾಧ್ಯವಾಗಿಲ್ಲ. ಆಗ ತಾವು ವಂಚನೆಗೆ ಒಳಗಾಗಿದ್ದು ಗೊತ್ತಾಗಿದೆ. ತಕ್ಷಣವೇ ಅವರು, ಈಶಾನ್ಯ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.

ಮಹಿಳೆಯರ ವಂಚಿಸುತ್ತಿದ್ದವ ಅರೆಸ್ಟ್:ಇನ್​ಸ್ಟಾಗ್ರಾಮ್​ನಲ್ಲಿ ಮಹಿಳೆಯರನ್ನು ಪರಿಚಯಿಸಿಕೊಂಡು ನಂತರ ಹಣಕ್ಕಾಗಿ ಬ್ಲ್ಯಾಕ್​ ಮೇಲ್​ ಮಾಡುತ್ತಿದ್ದ ಆರೋಪಿಯನ್ನು ಈಚೆಗೆ ಹೆಚ್​ಎಸ್​ಆರ್​ ಲೇಔಟ್​ ಠಾಣಾ ಪೊಲೀಸರು ಸೆರೆ ಹಿಡಿದಿದ್ದರು. ಅಸ್ಸಾಂ ಮೂಲದ ಫೈಸಲ್​ ಬಂಧಿತ ಆರೋಪಿ. ಈತ ಇನ್​ಸ್ಟಾಗ್ರಾಮ್​ನಲ್ಲಿ ಹೆಚ್ಚು ಆ್ಯಕ್ಟಿವ್​ ಇರುವ ಮಹಿಳೆಯರ ಪ್ರೊಫೈಲ್​ ಹುಡುಕಿ ಫಾಲೋ ಮಾಡುತ್ತಿದ್ದ. ನಂತರ ಅವರೊಂದಿಗೆ ಬಣ್ಣ ಬಣ್ಣದ ಮಾತುಗಳನ್ನಾಡಿ ಸ್ನೇಹ ಸಂಪಾದಿಸುತ್ತಿದ್ದ.

ಬಳಿಕ ಅವರನ್ನು ಭೇಟಿಯಾಗಲು ಹೇಳಿ ಲೈಂಗಿಕ ಸಂಪರ್ಕ ಬೆಳೆಸುತ್ತಿದ್ದ. ಈ ವೇಳೆ ಮಹಿಳೆಯರಿಗೆ ತಿಳಿಯದಂತೆ ವಿಡಿಯೋ ಚಿತ್ರೀಕರಣ ಮಾಡಿಕೊಂಡು ನಂತರ ಆ ವಿಡಿಯೋವನ್ನು ತೋರಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಹಣ ನೀಡದೇ ಹೋದಲ್ಲಿ ನಿಮ್ಮ ಗಂಡನಿಗೆ ವಿಡಿಯೋ ಕಳುಹಿಸುವುದಾಗಿ ಬೆದರಿಸುತ್ತಿದ್ದ. ಇದೇ ರೀತಿ ಮಹಿಳೆಯೊಬ್ಬರನ್ನು ಬೆದರಿಸಿದ್ದ ಆರೋಪಿ ಅವರನ್ನು ಚೆನ್ನೈಗೆ ಬರುವಂತೆ ಕರೆದಿದ್ದಾನೆ. ಈ ಬಗ್ಗೆ ನೊಂದ ಮಹಿಳೆ ಎಚ್​ಎಸ್​ಆರ್​ ಲೇಔಟ್​ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಚೆನ್ನೈಗೆ ತೆರಳಿ ಆರೋಪಿ ಫೈಸಲ್​ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಲೋಕಾಯುಕ್ತ ಅಧಿಕಾರಿಯೆಂದು ಬೆದರಿಸಿ ಸರ್ಕಾರಿ ಇಂಜಿನಿಯರ್​ಗಳಿಗೆ ಕರೆ‌ ಮಾಡಿ ಹಣ ಪೀಕುತ್ತಿದ್ದ ವಂಚಕ ಸೆರೆ

Last Updated : Sep 5, 2023, 2:55 PM IST

ABOUT THE AUTHOR

...view details