ಬೆಂಗಳೂರು:ಚುನಾವಣೆ ಎಂದರೆ ಅಬ್ಬರದ ಭಾಷಣಗಳು, ರಸ್ತೆ- ಮೈದಾನಗಳಲ್ಲಿ ಪ್ರಚಾರಗಳು,ಘೋಷಣೆಗಳು, ಜೈಕಾರ-ಧಿಕ್ಕಾರಗಳ ಮಧ್ಯೆ ಕಳೆದು ಹೋಗುತ್ತಿದೆ. ಆದರೆ ಇಲ್ಲೊಬ್ಬ ಅಭ್ಯರ್ಥಿ ಮೌನಾಚರಣೆ ಮೂಲಕವೇ ಪ್ರಚಾರ ಕಾರ್ಯ ಮಾಡುತ್ತಿದ್ದು, ಜನ ಜಾಗೃತಿಗಾಗಿ, ಸಾಮಾಜಿಕ ಹೋರಾಟಕ್ಕಾಗಿ ಚುನಾವಣೆಗೆ ನಿಂತಿದ್ದಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಇವರ ಹೆಸರು ಆಂಬ್ರೋಸ್ ಡಿ ಮೆಲ್ಲೋ. ಜೀವನವನ್ನೇ ಹೋರಾಟಕ್ಕಾಗಿ ಮುಡುಪಾಗಿಟ್ಟಿರುವ ಇವರು ಮೂಲತಃ ಮಂಗಳೂರಿನ ಪುತ್ತೂರಿನವರು. ಇದೀಗ ಬೆಂಗಳೂರು ದಕ್ಷಿಣ ಕ್ಷೇತ್ರದ ಕ್ರಮ ಸಂಖ್ಯೆ 12 ರಿಂದ ಸ್ಪರ್ಧಿಸಿದ್ದಾರೆ. ಸ್ಲೇಟು ಚಿಹ್ನೆ ಇವರ ಗುರುತಾಗಿದೆ. ಆಂಬ್ರೋಸ್ ಅವರು ನೈಸರ್ಗಿಕವಾಗಿ ಸಿಗುವ ನೀರಿನ ವ್ಯಾಪಾರಿಕರಣವನ್ನು ವಿರೋಧಿಸಿ ಮಾತು ನಿಲ್ಲಿಸಿದ್ದಾರೆ. ದಲಿತರ ಹತ್ಯೆ ಖಂಡಿಸಿ ಚಪ್ಪಲಿ ಹಾಕುವುದನ್ನೇ ಬಿಟ್ಟಿದ್ದಾರೆ. ಇಡೀ ದಿನ ಉಪವಾಸ ಸತ್ಯಾಗ್ರಹ ಮಾಡುವ ಇವರು ಶೌಚಾಲಯದ ನೀರನ್ನು ಕುಡಿದು ಬದುಕುತ್ತಿದ್ದಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಆಂಬ್ರೋಸ್ ಡಿ ಮೆಲ್ಲೋ. ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಯವರ ಸರ್ವಾಧಿಕಾರಿ ಧೋರಣೆಯ ವಿರುದ್ಧ ಜನರು ಯೋಚನೆ ಮಾಡಿ ಮತ ಹಾಕುವಂತೆ ಜನ ಜಾಗೃತಿ ಮೂಡಿಸುತ್ತಿದ್ದಾರೆ. ಇವರ ಈ ಹೋರಾಟಕ್ಕೆ ರೈತ ಸಂಘವೂ ಬೆಂಬಲ ನೀಡಿದೆ. ಬರೋಬ್ಬರಿ 5 ಬಾರಿ ವಿಧಾನಸಭಾ ಚುನಾವಣೆಗೂ, ಮೂರು ಬಾರಿ ಲೋಕಸಭಾ ಚುನಾವಣೆಗೂ ಸ್ಪರ್ಧಿಸಿರುವ ಇವರ ಮೌನ ಹೋರಾಟ ಮುಂದುವರಿದಿದೆ. ಗೆಲ್ಲುವುದು ಅಗತ್ಯವಲ್ಲ. ಜನರಿಗೆ ಚುನಾವಣೆಯ ಬಗ್ಗೆ ಅರಿವು ಮೂಡಿಸುವುದು ನನ್ನ ಕರ್ತವ್ಯ ಎನ್ನುತ್ತಾರೆ. ಹಿಂದೆ ರಾಜರು ಅಧಿಕಾರಕ್ಕಾಗಿ ಯುದ್ಧ ಮಾಡ್ತಿದ್ರು, ಈಗ ಅಧಿಕಾರಕ್ಕಾಗಿ ಚುನಾವಣೆಯೆಂಬ ಯುದ್ಧ ಮಾಡುತ್ತಿದ್ದಾರೆ. ಹೀಗಾಗಿ ಈ ಯುದ್ಧದಿಂದ ನಾನು ದೂರ ಇದ್ದೇನೆ ಎಂದು ಸ್ಲೇಟ್ನಲ್ಲಿ ಬರೆಯುವ ಮೂಲಕ ಜನರೊಂದಿಗೆ ಮಾತನಾಡುತ್ತಿದ್ದಾರೆ.
ಇವರು ಈವರೆಗೆ ನಡೆಸಿದ ಚುನಾವಣಾ ಖರ್ಚು ಕೇವಲ ನೂರು ರುಪಾಯಿ ಮಾತ್ರ. ಹಳೆ ನೋಟುಗಳು ಒಟ್ಟು 40 ಸಾವಿರ ಇದ್ದು, ಇದೇ ಇವರ ಆಸ್ತಿ ಆಗಿದೆ.
ಜಯನಗರದ ಬಸ್ ನಿಲ್ದಾಣಗಳಲ್ಲಿ, ರಸ್ತೆಗಳಲ್ಲಿ, ಬೀದಿ ಬದಿಯಲ್ಲಿ ವ್ಯಾಪಾರಿಗಳ ಬಳಿ ಮೌನವಾಗಿಯೇ ಮತಯಾಚನೆ ಮಾಡುತ್ತಿದ್ದಾರೆ. ಅನ್ಯಾಯ, ಅನೈತಿಕತೆ ಹೆಚ್ಚಾಗಿರುವ ಈಗಿನ ಚುನಾವಣೆಗಳಲ್ಲಿ ಆಂಬ್ರೋಸ್ ವಿಭಿನ್ನವಾಗಿ ನಿಲ್ಲುತ್ತಾರೆ.