ಕರ್ನಾಟಕ

karnataka

ETV Bharat / state

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳೇ ನಿರ್ಣಾಯಕ: ಯಾರಿಗೆ ಸಿಗಲಿದೆ ಗೆಲುವು? - ಕರ್ನಾಟಕ ವಿಧಾನಸಭಾ ಚುನಾವಣೆ

ಬೆಂಗಳೂರಿನ ಅತಿ ದೊಡ್ಡ ಕ್ಷೇತ್ರ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಜೋರಾಗಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಆರು ಮಂದಿ ಪಕ್ಷೇತರರು ಸೇರಿದಂತೆ ಒಟ್ಟು 13 ಮಂದಿ ಕಣದಲ್ಲಿದ್ದಾರೆ. ​ಮೂರು ಬಾರಿ ಗೆದ್ದು ನಾಲ್ಕನೆ ಬಾರಿಯ ಅದೃಷ್ಟ ಪರೀಕ್ಷೆಯಲ್ಲಿ ಬಿಜೆಪಿ ಶಾಸಕ ಎಂ.ಕೃಷ್ಣಪ್ಪ ಇದ್ದರೆ, ಅವರನ್ನು ಕಟ್ಟಿಹಾಕಲು ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯತಂತ್ರ ರೂಪಿಸಿವೆ.

Bangalore South Constituency
Bangalore South Constituency

By

Published : May 3, 2023, 6:58 PM IST

ಬೆಂಗಳೂರು ದಕ್ಷಿಣ ಕ್ಷೇತ್ರ

ಬೆಂಗಳೂರು:ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲೂ ಚುನಾವಣಾ ಅಖಾಡ ರಂಗೇರಿದ್ದು, ಮೂರು ಪಕ್ಷಗಳು ಬಿರುಸಿನ ಪ್ರಚಾರ ನಡೆಸುತ್ತಿವೆ. ಪ್ರಮುಖವಾಗಿ ಒಕ್ಕಲಿಗ ಸಮುದಾಯ ಹೆಚ್ಚು ಹೊಂದಿರುವ ದಕ್ಷಿಣ ವಿಧಾಸಭಾ ಕ್ಷೇತ್ರದಲ್ಲಿ ಮೂರು ಪಕ್ಷಗಳಲ್ಲಿ ಪ್ರಬಲ ಪೈಪೋಟಿ ಏರ್ಪಟ್ಟಿದೆ. ಅತಿ ಹೆಚ್ಚು ಮತದಾರರನ್ನು ಹೊಂದಿರುವ, ದೊಡ್ಡ ಕ್ಷೇತ್ರವಾಗಿರುವ ಬೆಂಗಳೂರು ದಕ್ಷಿಣದಲ್ಲಿ ಪ್ರಸ್ತುತ ಬಿಜೆಪಿ ಶಾಸಕ ಎಂ.ಕೃಷ್ಣಪ್ಪ ಗೆದ್ದಿದ್ದಾರೆ. ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಸಾಧಿಸಿರುವ ಅವರು ಮತ್ತೆ ನಾಲ್ಕನೇ ಬಾರಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇವರನ್ನು ಸೋಲಿಸಲು ಅಷ್ಟೇ ಪೈಪೋಟಿಯನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ನೀಡಲು ಕಾರ್ಯತಂತ್ರ ರೂಪಿಸಿವೆ.

ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೃಷ್ಣಪ್ಪ

ಉತ್ತರಹಳ್ಳಿಯಿಂದ ಆರಂಭವಾಗಿ ಸುಬ್ರಹ್ಮಣ್ಯಪುರ, ವಸಂತಪುರ, ಚುಂಚಘಟ್ಟ, ಅಂಜನಾಪುರ, ಯಲಚೇನಹಳ್ಳಿ, ಬೇಗೂರು, ಕಾಳೇನ ಅಗ್ರಹಾರ, ಗೊಟ್ಟಿಗೆರೆ ಸುತ್ತಮುತ್ತಲ ಪ್ರದೇಶವನ್ನು ಒಳಗೊಂಡಿದೆ. ನೈಸ್ ರಸ್ತೆಯಿಂದ ಆಚೆಗಿನ ಹಳ್ಳಿಗಳೂ ಈ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಎಲೆಕ್ಟ್ರಾನಿಕ್ ಸಿಟಿಯಿಂದ ಬನ್ನೇರುಘಟ್ಟದವರೆಗೆ ಮತ್ತು ಜಿಗಣಿ ವರೆಗೂ ಈ ಕ್ಷೇತ್ರ ವ್ಯಾಪಿಸಿದೆ. 2008 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾದಾಗ ಉತ್ತರಹಳ್ಳಿ ಕ್ಷೇತ್ರದಲ್ಲಿದ್ದ ಪ್ರದೇಶಗಳು ಬೆಂಗಳೂರು ದಕ್ಷಿಣ ಕ್ಷೇತವಾಗಿ ಪ್ರತ್ಯೇಕಗೊಂಡಿತು. ನಗರ ಹಾಗೂ ಗ್ರಾಮೀಣ ಜನರು, ವಲಸೆ ಕಾರ್ಮಿಕರು ಈ ಕ್ಷೇತ್ರದ ಮತದಾರರು. ರಾಜ್ಯದಲ್ಲಿಯೇ ಅತಿ ಹೆಚ್ಚು ಮತದಾರರನ್ನು ಹೊಂದಿರುವ ವಿಧಾನಸಭಾ ಕ್ಷೇತ್ರ ಎಂಬುದು ಮತ್ತೊಂದು ವಿಶೇಷ. ಈ ಕ್ಷೇತ್ರದಲ್ಲಿ 6.50 ಲಕ್ಷ ಮತದಾರರಿದ್ದು, 2018ರ ಚುನಾವಣೆಯಲ್ಲಿ 6.03 ಲಕ್ಷ ಜನ ಮತ ಚಲಾಯಿಸಿದ್ದು ಹೆಗ್ಗಳಿಕೆಗೆ ಪಾತ್ರವಾಗಿದೆ.

ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೃಷ್ಣಪ್ಪ

ಕ್ಷೇತ್ರ ವಿಂಗಡಣೆಯಾದ ನಂತರ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ತನ್ನ ಹಿಡಿತ ಸಾಧಿಸಿಕೊಂಡೇ ಬಂದಿದೆ. ಸತತ ಮೂರು ಬಾರಿ ಎಂ.ಕೃಷ್ಣಪ್ಪ ಅವರೇ ಶಾಸಕರಾಗಿ ಆಯ್ಕೆಯಾಗಿದ್ದಾರೆ. ನಾಲ್ಕನೇ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದು, ಕಾಂಗ್ರೆಸ್​ನಿಂದ ಆರ್.ಕೆ. ರಮೇಶ್ ಕಣಕ್ಕಿಳಿದಿದ್ದರೆ. ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಬೇಸರಗೊಂಡು ಜೆಡಿಎಸ್​ಗೆ ಸೇರ್ಪಡೆಗೊಂಡ ಹೆಚ್​.ಪಿ. ರಾಜಗೋಪಾಲರೆಡ್ಡಿ ಸ್ಪರ್ಧಿಸಿದ್ದಾರೆ. ಈ ಬಾರಿಯ ಕಣದಲ್ಲಿ ಆರು ಮಂದಿ ಪಕ್ಷೇತರರು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಪಕ್ಷ, ಸಮಾಜವಾದಿ ಪಕ್ಷ ಸೇರಿದಂತೆ ಒಟ್ಟು 13 ಮಂದಿ ಕಣದಲ್ಲಿದ್ದಾರೆ.

ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೃಷ್ಣಪ್ಪ

2018ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆರ್.ಕೆ. ರಮೇಶ್ 1.22 ಲಕ್ಷ ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದರು. 2008ರ ಚುನಾವಣೆಯಲ್ಲಿ ರಾಜಗೋಪಾಲರೆಡ್ಡಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ 17 ಸಾವಿರ ಮತಗಳನ್ನು ಪಡೆದಿದ್ದರು. ಈ ಬಾರಿಯೂ ಅವರಿಗೆ ಕೈ ಟಿಕೆಟ್ ಸಿಗಲಿಲ್ಲ. ಹಾಗಾಗಿ, ಜೆಡಿಎಸ್​ನತ್ತ ಮುಖಮಾಡಿದ್ದಾರೆ. ಆರ್. ಪ್ರಭಾಕರ ರೆಡ್ಡಿ ಅವರಿಗೆ ಟಿಕೆಟ್ ಘೋಷಿಸಿದ್ದ ಜೆಡಿಎಸ್, ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಜಗೋಪಾಲರೆಡ್ಡಿ ಅವರಿಗೆ ಟಿಕೆಟ್ ನೀಡಿದೆ. 2013 ರಲ್ಲಿ ನಡೆದ ಚುನಾವಣೆಯಲ್ಲಿ ಪ್ರಭಾಕರರೆಡ್ಡಿ 71 ಸಾವಿರ ಮತಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನಕ್ಕೆ ಬಂದಿದ್ದರು. ಆದರೆ, 2018ರ ಚುನಾವಣೆಯಲ್ಲಿ 36 ಸಾವಿರ ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದರು. ಬಿಜೆಪಿ ಹಿಡಿತದಲ್ಲಿರುವ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮುಂದಾಗಿವೆ. ಒಕ್ಕಲಿಗರೇ ನಿರ್ಣಾಯಕರಾಗಿರುವ ಈ ಕ್ಷೇತ್ರದಲ್ಲಿ ಜೆಡಿಎಸ್ ಸಹ ತನ್ನದೇ ಆದ ತಂತ್ರಗಾರಿಕೆ ಮಾಡುತ್ತಿದೆ.

ಜೆಡಿಎಸ್ ಅಭ್ಯರ್ಥಿ ರಾಜಗೋಪಾಲರೆಡ್ಡಿ

ಕ್ಷೇತ್ರದಲ್ಲಿರುವ ಸಮಸ್ಯೆಗಳೇನು?:ದಕ್ಷಿಣ ಕ್ಷೇತ್ರದಲ್ಲಿ ಸಮಸ್ಯೆಗಳು ಹಲವಾರು ಇವೆ. ದೊಡ್ಡ ಕ್ಷೇತ್ರವಾಗಿರುವುದರಿಂದ ಹಳ್ಳಿ ಹಾಗೂ ನಗರ ಪ್ರದೇಶಗಳನ್ನು ಹೊಂದಿದ್ದು, ಇದರ ಜೊತೆಗೆ ಸಮಸ್ಯೆಗಳಿಗೇನು ಕಡಿಮೆ ಇಲ್ಲ. ಈ ಕ್ಷೇತ್ರದಲ್ಲಿ ರಿಯಲ್ ಎಸ್ಟೇಟ್ ವೇಗವಾಗಿ ಬೆಳೆಯುತ್ತಿದೆ. ಹಲವು ಕಡೆ ನೀರಿನ ಸಮಸ್ಯೆ ಬಗೆಹರಿದಿಲ್ಲ. ಮುಖ್ಯವಾಗಿ ಟ್ರಾಫಿಕ್ ಸಮಸ್ಯೆ ಇದೆ. ಕನಕಪುರ ರಸ್ತೆಯಲ್ಲಿ ಪ್ರತಿನಿತ್ಯ ಟ್ರಾಫಿಕ್ ಕಿರಿಕಿರಿಯನ್ನು ಜನರು ಅನುಭವಿಸುತ್ತಿದ್ದಾರೆ. ಹಳ್ಳಿಗಳಿಗೆ ತೆರಳುವ ರಸ್ತೆಗಳು ಹಾಳಾಗಿವೆ.

ಜೆಡಿಎಸ್ ಅಭ್ಯರ್ಥಿ ರಾಜಗೋಪಾಲರೆಡ್ಡಿ

ಮತದಾರರೆಷ್ಟು?:ಈ ಕ್ಷೇತ್ರ ಸರಿಸುಮಾರು 6,50,532 ಮತದಾರರನ್ನು ಹೊಂದಿದೆ. ಈ ಪೈಕಿ 3,44,268 ಪುರುಷ ಮತದಾರರಿದ್ದಾರೆ. 3,06,165 ಮಂದಿ ಮಹಿಳಾ ಮತದಾರರು ಇದ್ದಾರೆ. ಇತರ ಮತದಾರರು 99 ಇದ್ದಾರೆ. ಒಕ್ಕಲಿಗ ಮತದಾರರು ನಿರ್ಣಾಯಕ. ಅವರ ಜೊತೆ ಒಬಿಸಿ, ಎಸ್‌ಸಿ-ಎಸ್‌ಟಿ, ಲಿಂಗಾಯತ, ಬ್ರಾಹ್ಮಣ ಸೇರಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ವಿವರ

ತ್ರಿಕೋನ ಸ್ಪರ್ಧೆ: ಈ ಕ್ಷೇತ್ರದಲ್ಲಿ ಏನಿದ್ದರೂ ತ್ರಿಕೋನ ಸ್ಪರ್ಧೆ. ಆದರೆ, ಬಿಜೆಪಿ ಮೂರು ಬಾರಿಯೂ ವಿಜಯ ಪತಾಕೆ ಹಾರಿಸಿದೆ. ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ಉತ್ತಮ‌ ಪೈಪೋಟಿ ನೀಡಿದ್ದರು. 2018ರಲ್ಲಿ ಬಿಜೆಪಿ ಹಾಲಿ ಶಾಸಕ ಎಂ.ಕೃಷ್ಣಪ್ಪ 1,52,427 ಮತ ಗಳಿಸಿ ಜಯಭೇರಿ ಬಾರಿಸಿದ್ದರು. ಇತ್ತ ಕಾಂಗ್ರೆಸ್ ಅಭ್ಯರ್ಥಿ ಒಟ್ಟು 1,22,068 ಮತಗಳನ್ನು ಪಡೆದಿದ್ದರು. ಇನ್ನು ಜೆಡಿಎಸ್ ಅಭ್ಯರ್ಥಿ ಒಟ್ಟು 36,138 ಮತ ಗಳಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಈ ಬಾರಿ ಜೆಡಿಎಸ್ ಅಭ್ಯರ್ಥಿ ರಾಜಗೋಪಾಲರೆಡ್ಡಿ ಅವರು ಬಿಜೆಪಿ ಹಾಗೂ ಕಾಂಗ್ರೆಸ್​ಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ರೋಡ್ ಶೋ ಮೂಲಕ ಮೂರು ಪಕ್ಷದ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.

'ಬಿಜೆಪಿ ಸರ್ಕಾರದ ಅವಧಿಯಲ್ಲಿ ಜನಪರವಾದ ಸಾಕಷ್ಟು ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದ್ದು, ಇದನ್ನು ಮನೆ ಮನೆಗೆ ತಲುಪಿಸುವ ಹೊಣೆ ಕಾರ್ಯಕರ್ತರ ಮೇಲಿದೆ. ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದೆ. ಬಿಜೆಪಿಯ ಗೆಲವು ಅಭಿವೃದ್ಧಿಯ ಗೆಲುವು' ಎನ್ನುತ್ತಾರೆ ಬಿಜೆಪಿ ಅಭ್ಯರ್ಥಿ ಎಂ.ಕೃಷ್ಣಪ್ಪ.

'ನಾನು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ, ಕೊನೆ ಗಳಿಗೆಯಲ್ಲಿ ಟಿಕೆಟ್ ಕೈತಪ್ಪಿತು. ಇದರಿಂದ ನನಗೆ ತುಂಬಾ ನೋವಾಗಿದೆ. ಹಾಗಾಗಿ, ಜೆಡಿಎಸ್​ಗೆ ಸೇರಿದ್ದು, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಆಶೀರ್ವಾದ ಪಡೆದು ಚುನಾವಣಾ ಅಖಾಡಕ್ಕೆ ಇಳಿದಿದ್ದೇನೆ. ನನಗೆ ಆತ್ಮವಿಶ್ವಾಸವಿದೆ. ಜನರು ಆಶೀರ್ವಾದ ಮಾಡುತ್ತಾರೆ. ಈ ಬಾರಿ ಜಯ ಸಾಧಿಸುತ್ತೇನೆ' ಎಂದು ಜೆಡಿಎಸ್ ಅಭ್ಯರ್ಥಿ ರಾಜಗೋಪಾಲರೆಡ್ಡಿ ಹೇಳಿದ್ದಾರೆ.

'ಕಳೆದ ಬಾರಿ ನಾನು ಎರಡನೇ ಸ್ಥಾನಕ್ಕೆ ಬಂದಿದ್ದೆ. ಎಲ್ಲಾ ಕಡೆ ಪ್ರಚಾರ ನಡೆಸುತ್ತಿದ್ದೇನೆ. ಕ್ಷೇತ್ರದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಈ ಬಾರಿ ಗೆದ್ದೇ ಗೆಲ್ಲುತ್ತೇನೆ' ಎಂದು ಕಾಂಗ್ರೆಸ್ ಅಭ್ಯರ್ಥಿ ಆರ್.ಕೆ.ರಮೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ಎಲ್ಲ ಕಡೆ ಒಳಚರಂಡಿ, ಮೋರಿಗಳು ಆಗಿವೆ. ನೀರಿನ ಸಮಸ್ಯೆ ಬಗೆಹರಿಸಿದ್ದಾರೆ. ಬೋರ್​ವೆಲ್ ಸಹಾ ಹಾಕಿಸಿಕೊಟ್ಟಿದ್ದಾರೆ. ಈ ಬಾರಿ ನೂರಕ್ಕೆ ನೂರರಷ್ಟು ಬಿಜೆಪಿ ಬರುತ್ತದೆ. ಇನ್ನು ಹಲವು ಕೆಲಸ ಆಗಬೇಕು. ಬೆಂಗಳೂರನ್ನು ಸ್ಮಾಟ್ ಸಿಟಿ ಅಂತರೆ, ಪ್ರದೇಶ ಹಿಂಗೇ ಇದೆ. ಈ ಅಭಿವೃದ್ಧಿ ಸಾಲದು. ಇನ್ನೂ ಅಭಿವೃದ್ಧಿ ಮಾಡಬೇಕು. ರಸ್ತೆಗೆ ಕಾಂಕ್ರೆಟ್ ಹಾಕಬೇಕು. ನಮ್ಮ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಯಿದ್ದರೂ ಅಷ್ಟೆ ಏನಾದರೂ ಇದ್ದರೆ ಅಷ್ಟೆ. ಈ ಬಾರಿನೂ ಬಿಜೆಪಿನೇ ಗೆಲ್ಲುವುದು 'ಎಂದು ಸ್ಥಳೀಯ ನಿವಾಸಿ ಮಾರಪ್ಪ ಹೇಳುತ್ತಾರೆ.

ಇದನ್ನೂ ಓದಿ:ವಿಧಾನಸಭಾ ಚುನಾವಣೆ: 1087 ಅಭ್ಯರ್ಥಿಗಳು ಕೋಟಿವೀರರು, 14 ಜನರ ಆಸ್ತಿ ಶೂನ್ಯ!

ABOUT THE AUTHOR

...view details