ಬೆಂಗಳೂರು: ಉದಯಪುರ ಹತ್ಯೆ ಖಂಡಿಸಿ ಕಾಂಗ್ರೆಸ್ ದೇಶದಲ್ಲಿ ಏಕೆ ಪ್ರತಿಭಟನೆ ಮಾಡಿಲ್ಲ ಎಂಬುದಕ್ಕೆ ಉತ್ತರಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಆಗ್ರಹಿಸಿದರು. ಉದಯಪುರದಲ್ಲಿ ನಡೆದ ಟೈಲರ್ ಕನ್ಹಯ್ಯ ಲಾಲ್ ಹತ್ಯೆಯನ್ನು ಖಂಡಿಸಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರವಿಕುಮಾರ್, ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಬಹುತೇಕ ಸತ್ತು ಹೋಗಿದೆ. ಕೊಲೆಗಡುಕರನ್ನು ಕೂಡಲೇ ರಸ್ತೆ ಮಧ್ಯದಲ್ಲಿ ಗಲ್ಲಿಗೇರಿಸಬೇಕು. ಕೊಲೆಗಡುಕರು ಮತ್ತು ಭಯೋತ್ಪಾದನೆಯನ್ನು ಬೆಂಬಲಿಸುವ ಕಾಂಗ್ರೆಸ್ ಪಕ್ಷದಿಂದ ಅಲ್ಪಸಂಖ್ಯಾತ ಬಂಧುಗಳು ದೂರ ಸರಿದು, ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಕೋತಿನ್ಯಾಯ ರೀತಿಯಲ್ಲಿ ವರ್ತಿಸುವ ಕಾಂಗ್ರೆಸ್ ಪಕ್ಷದಿಂದ ಅಲ್ಪಸಂಖ್ಯಾತ ಬಂಧುಗಳು ದೂರ ಸರಿಯಬೇಕಿದೆ. ಮುಸ್ಲಿಂ ಬುದ್ಧಿಜೀವಿಗಳು ಮತ್ತು ಚಿಂತಕರು ಇಂಥ ಕೊಲೆಯನ್ನು ಖಂಡಿಸಬೇಕಿದೆ. ಹತ್ಯೆಗೆ ರಾಜಸ್ಥಾನದ ಕಾಂಗ್ರೆಸ್ ಸರ್ಕಾರವೇ ಹೊಣೆ ಹೊರಬೇಕು. ಬಟ್ಟೆ ಅಳತೆ ಕೊಡುವ ನೆಪದಲ್ಲಿ ಬಂದು ಕತ್ತನ್ನು ಕೊಯ್ದು 26 ಬಾರಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿದೆ. ಹಂತಕರು ಪ್ರಧಾನಿಗೂ ಬೆದರಿಕೆ ಹಾಕಿದ್ದಾರೆ. ಇದರ ಕುರಿತು ತನಿಖೆ ಮಾಡಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.