ಬೆಂಗಳೂರು: ನಿನ್ನೆ ರಾತ್ರಿ 10 ಗಂಟೆಯಿಂದ ವೀಕೆಂಡ್ ಕರ್ಫ್ಯೂ ಜಾರಿಯಲಿದ್ದು, ಜನರು ಅನಗತ್ಯವಾಗಿ ಓಡಾಡದಂತೆ ಹಾಗೂ ಗುಂಪು ಸೇರದಂತೆ ತಡೆಯಲು ಪೊಲೀಸ್ ಸಿಬ್ಬಂದಿ ಕಾರ್ಯೋನ್ಮುಖರಾಗಿದ್ದಾರೆ. ಈ ಮಧ್ಯೆ ತರಕಾರಿ ತರಲು ಬಂದ ವೃದ್ಧನೊಬ್ಬನ ವಾಹನವನ್ನು ಪೊಲೀಸರು ಸೀಜ್ ಮಾಡಿ ನಂತರ ವಾಪಸ್ ಕೊಟ್ಟು ಕಳುಹಿಸಿದ ಘಟನೆ ನಡೆದಿದೆ.
ವೃದ್ಧ ಬೀರೇಗೌಡ ಎನ್ನುವರು ತರಕಾರಿ ತೆಗೆದುಕೊಂಡು ಹೋಗಲು ವಾಹನ ತಂದಿದ್ದರು. ಈ ವೇಳೆ ವಾಹನ ಸೀಜ್ ಮಾಡಿದ ಪೊಲೀಸರು, ಕೇಸ್ ಹಾಕಲು ಮುಂದಾಗಿದ್ದರು. ವೃದ್ಧ ಎಷ್ಟು ಹೇಳಿದರು ಕೂಡಾ ಪೊಲೀಸರು ಮಾತ್ರ ಮೇಲಧಿಕಾರಿಗಳ ನಿರ್ದೇಶನದಂತೆ ಬಿಟ್ಟು ಕಳುಹಿಸಲು ಸಾಧ್ಯವಿಲ್ಲ, ನಿಮ್ಮ ಮೇಲೂ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಪೊಲೀಸರ ವರ್ತನೆಯಿಂದ ಮನನೊಂದ ವೃದ್ಧ ಇದ್ದ ತರಕಾರಿಯನ್ನ ನೆಲಕ್ಕೆ ಹಾಕಿ ಕಣ್ಣೀರು ಹಾಕಿದ್ದಾನೆ. ಕೊನೆಗೂ ವೃದ್ಧನ ಕಣ್ಣೀರಿಗೆ ಕರಗಿದ ಪೊಲೀಸರು, ಸೀಜ್ ಮಾಡಿ ಪೊಲೀಸ್ ಠಾಣೆಯಲ್ಲಿಟ್ಟಿದ್ದ ಬೀರೇಗೌಡರ ವಾಹನ ವಾಪಸ್ ಕೊಟ್ಟು ಕಳುಹಿಸಿದ್ದಾರೆ.