ಬೆಂಗಳೂರು: ನಗರ ಹಾಗೂ ಕೆಲ ಜಿಲ್ಲೆಗಳ ಮಹಿಳೆಯರು, ಮಕ್ಕಳಿಗೆ, ಹಿರಿಯ ನಾಗರಿಕರಿಗೆ ತೊಂದರೆ ಎದುರಾದಾಗ ಸಹಾಯಕ್ಕೆ ಬರುವುದೇ ನಗರ ಆಯುಕ್ತರ ಕಚೇರಿ ಬಳಿ ಇರುವ ವನಿತಾ ಸಹಾಯವಾಣಿ. ಸದ್ಯ ವನಿತಾ ಸಹಾಯವಾಣಿ ಸಂಕಷ್ಟದದಲ್ಲಿದ್ದು, ಕಳೆದ ಕೆಲ ವರ್ಷಗಳಿಂದ ಆಯುಕ್ತರ ಕಚೇರಿಯಲ್ಲಿರುವ ಈ ಕಚೇರಿಯನ್ನು ಏಕಾಏಕಿ ಖಾಲಿ ಮಾಡುವಂತೆ ಸೂಚನೆ ನೀಡಲಾಗಿದೆ. ಹಾಗೆೆಯೇ ಇಲ್ಲಿ ಕೆಲಸ ನಿರ್ವಹಣೆ ಮಾಡುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ತಾವು ಸೂಚಿಸಿದ ಸ್ಥಳದಲ್ಲಿ ಕೆಲಸ ಮಾಡುವಂತೆಯೂ ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ವನಿತಾ ಸಹಾಯವಾಣಿ ಕಛೇರಿ ಖಾಲಿ ಮಾಡುವಂತೆ ನಗರ ಪೊಲೀಸ್ ಆಯುಕ್ತರ ಸೂಚನೆ ಸಹಾಯವಾಣಿಯ ಜವಾಬ್ದಾರಿಯನ್ನು ಡಿಸಿಪಿ ಆಡಳಿತ ವಿಭಾಗ ನೋಡಿಕೊಳ್ಳುತ್ತಿದ್ದರು. ಆದರೆ ಸದ್ಯ ಕಮಿಷನರ್ ಕಚೇರಿಯ ಕೆಲ ಕೆಲಸಗಳನ್ನು ವನಿತಾ ಸಹಾಯವಾಣಿ ಕಚೇರಿಗೆ ಶಿಫ್ಟ್ ಮಾಡುತ್ತಿದ್ದು ನಗರದ ಮಹಿಳಾ ಪೊಲೀಸ್ ಠಾಣೆಯಾದ ಶಿವಾಜಿ ನಗರ ಮಹಿಳಾ ಠಾಣೆ, ಬಸವನಗುಡಿ ಮಹಿಳಾ ಠಾಣೆಗೆ ತೆರಳುವಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಸೂಚಿಸಿದ್ದಾರೆ. ಹೀಗಾಗಿ ಕಮಿಷನರ್ ಕಚೇರಿಯಿಂದ ತೆರಳುವುದು ಅನಿವಾರ್ಯವಾಗಿದೆ.
ಇಲ್ಲಿಗೆ ಬರುತ್ತಿದ್ದ ದೂರುಗಳ ಸ್ವರೂಪ:
ಈ ವನಿತಾ ಸಹಾಯವಾಣಿಗೆ ಹೆಚ್ಚಾಗಿ ಗಂಡನಿಂದ ಕಿರುಕುಳ, ಅತ್ತೆ, ಮಾವನಿಂದ ಕಿರುಕುಳ, ಗಂಡನ ವಿಚಿತ್ರ ವರ್ತನೆ, ಬಾಲ್ಯ ವಿವಾಹ, ಮಕ್ಕಳು ಪೋಷಕರನ್ನು ಸರಿಯಾಗಿ ನೋಡದೆ ಮನೆಯಿಂದ ಹೊರ ಹಾಕುವ ಪ್ರಕರಣಗಳು ಪ್ರತಿ ದಿನ ಬರುತ್ತಿದ್ದವು. ಕೆಲವರು ಠಾಣೆ ಮಟ್ಟಿಲೇರಿ ತಮ್ಮ ಸಮಸ್ಯೆ ಬಗೆಹರಿಯಲ್ಲ ಎಂಬ ಕಾರಣಕ್ಕೆ ನಗರ ಆಯುಕ್ತರ ಕಚೇರಿಗೆ ಬಂದು ತಮ್ಮ ನೋವು ಹೇಳುತ್ತಿದ್ದರು. ಈ ವೇಳೆ ಅವರಿಗೆ ಕೌನ್ಸೆಲಿಂಗ್ ನಡೆಸಿ ತದ ನಂತರ ಅಗತ್ಯ ಬಿದ್ರೆ ಪೊಲೀಸ್ ಠಾಣೆಗೆ ದೂರು ದಾಖಲಿಸಿ ಕ್ರಮ ಕೈಗೊಳ್ಳುತ್ತಿದ್ದರು.
ಸದ್ಯ ಎರಡು ಕಚೇರಿ ಮಹಿಳಾ ಠಾಣೆಗಳಿಗೆ ವರ್ಗಾವಣೆಯಾದ ಕಾರಣ ಅಷ್ಟೊಂದು ಜನ ತಮ್ಮ ಸಮಸ್ಯೆ ಹೇಳಿಕೊಂಡು ಠಾಣೆ ಬಳಿ ಬರಲ್ಲ. ವನಿತಾ ಸಹಾಯವಾಣಿಯಲ್ಲಾದ್ರೇ ಬಹುತೇಕ ಮಾಹಿತಿ ಗೌಪ್ಯವಾಗಿರುತ್ತಿತ್ತು. ಆದರೆ ಠಾಣೆಗೆ ಬಂದು ವೈಯಕ್ತಿಕ ವಿಚಾರ ಹೇಳಲು ಹಿಂಜರಿಯುತ್ತಾರೆಂದು ಸಿಬ್ಭಂದಿ ಹೇಳುತ್ತಿದ್ದಾರೆ. ಆದರೆ ಕಮಿಷನರ್ ಅವರೇ ಆದೇಶ ನೀಡಿದ ಕಾರಣ ಸೂಚಿಸಿದ ಸ್ಥಳಗಳಿಗೆ ತೆರಳಿ ಕೆಲಸ ಮಾಡುವುದನ್ನು ಬಿಟ್ಟು ಬೇರೆ ದಾರಿ ಇಲ್ಲ. ಜೊತೆಗೆ ಮಹಿಳೆಯರು ಕೂಡ ತಮಗೆ ತೊಂದರೆ ಬಂದಾಗ ಎರಡು ಮಹಿಳಾ ಠಾಣೆ ಬಳಿ ತೆರಳಿ ತಮ್ಮ ಸಮಸ್ಯೆಯನ್ನು ವ್ಯಕ್ತಪಡಿಸಬೇಕಾಗಿದೆ.
ಕಚೇರಿ ಶಿಫ್ಟ್ ಮಾಡುವುದರಿಂದಾಗುವ ಸಮಸ್ಯೆ ಏನು?:
ಹೆಸರು ಹೇಳಲು ಇಚ್ಚೆ ಪಡದ ವನಿತಾ ಸಹಾಯವಾಣಿ ಸಿಬ್ಬಂದಿಯೋರ್ವರು ಮಾತನಾಡಿ, "ಹಲವಾರು ವರ್ಷಗಳಿಂದ ಮಹಿಳೆಯರ ಕೌನ್ಸೆಲಿಂಗ್ ಮಾಡುತ್ತಿದ್ದೆವು. ಬಹಳಷ್ಟು ಮಂದಿ ಗೌಪ್ಯವಾಗಿ ನಾವು ಮಾಹಿತಿ ಇಡುತ್ತೇವೆ ಎಂಬ ಕಾರಣಕ್ಕೆ ಇಲ್ಲಿಗೆ ಬರುತ್ತಿದ್ದರು. ಸದ್ಯ ಏಕಾಏಕಿ ತೆರಳುವಂತೆ ತಿಳಸಿದ್ದಾರೆ. ನಮ್ಮ ಸಿಬ್ಬಂದಿಗಳ ನಡುವೆ ರಾಜಕೀಯ ನಡೀತಿದೆ. ಈ ವಿಚಾರಗಳು ಅಧಿಕಾರಿಗಳ ಗಮನಕ್ಕೆ ಬಂದು ಈ ರೀತಿಯಾದ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದ ಬಹಳಷ್ಟು ಮಹಿಳೆಯರಿಗೆ ಕಷ್ಟವಾಗುತ್ತೆ. ಏಕೆಂದರೆ ಕಮಿಷನರ್ ಕಚೇರಿಗೆ ಬರಲು ಸಾಮಾನ್ಯವಾಗಿ ಯಾರೂ ಹೆದರಲ್ಲ. ನಾವು ಕೌನ್ಸೆಲಿಂಗ್ ಮಾಡಿ ಕಳುಹಿಸುತ್ತಿದ್ದೆವು. ಆದರೆ ಠಾಣೆಗೆ ಬರಲು ಹಿಂಜರಿಯುತ್ತಾರೆ. ಕೋರ್ಟ್, ಕೇಸ್ ಅಂತಾ ಹೆದರಿ ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗುತ್ತೆ. ಹೀಗಾಗಿ ದಿಢೀರ್ ವರ್ಗಾವಣೆಯಿಂದ ಬೇಸರವಾಗಿದೆ. ಸಮಸ್ಯೆಗಳು ಇರುವುದನ್ನು ಬಗೆಹರಿಸಿದರೆ ಸಹಾಯವಾಗುತ್ತಿತ್ತು" ಎಂದಿದ್ದಾರೆ.