ಬೆಂಗಳೂರು:ಲಾಕ್‌ಡೌನ್ ಸಂದರ್ಭದಲ್ಲಿ ಉಂಟಾದ ಆರ್ಥಿಕ ಸಂಕಷ್ಟದಿಂದಾಗಿ ಮೈಸೂರಿನಿಂದ ಬೆಂಗಳೂರು ನಗರಕ್ಕೆ ಬಂದು ಟ್ಯಾಕ್ಸಿಗಳನ್ನು ಕಳವು ಮಾಡುತ್ತಿದ್ದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ತಲಕಾಡು ನಿವಾಸಿ ಮಾದೇಶ (38) ಬಂಧಿತನಾಗಿದ್ದು, ಆರೋಪಿಯಿಂದ ಒಟ್ಟು ನಾಲ್ಕು ಟ್ಯಾಕ್ಸಿಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಬೆಂಗಳೂರು, ಮೈಸೂರು ಭಾಗದಲ್ಲಿ ಉಪಯೋಗಿಸಿದ ಕಾರುಗಳ ಮಾರಾಟ ಮಾಡುವ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದನು.
ಆರೋಪಿ ಬೆಂಗಳೂರಿಗೆ ಬಂದು ತನ್ನ ಸಂಪರ್ಕದಲ್ಲಿರುವ ಸ್ನೇಹಿತರ ಮೂಲಕ ಕಾರುಗಳ ಖರೀದಿ, ಮಾರಾಟ ವ್ಯವಹಾರ ನಡೆಸುತ್ತಿದ್ದನು. 2020ರಿಂದ ಕೊರೊನಾ ಲಾಕ್‌ಡೌನ್‌ನಿಂದ ವ್ಯವಹಾರ ಕುಂಠಿತಗೊಂಡಿತ್ತು. ಈ ವೇಳೆ ಕಾರುಗಳನ್ನು ಕದಿಯಲು ಮುಂದಾಗಿದ್ದಾನೆ.
ಇದನ್ನೂ ಓದಿ: ಜಮನ್ಲಾಲ್ ಬಜಾಜ್ ಸೇವಾ ಟ್ರಸ್ಟ್ ಭೂ ವಿವಾದ:ನ್ಯಾಯಾಧಿಕರಣ ಆದೇಶ ರದ್ದುಗೊಳಿಸಿದ ಹೈಕೋರ್ಟ್
ಏಪ್ರಿಲ್ 28ರಂದು ಬೆಂಗಳೂರು ಪಶ್ಚಿಮ ವಿಭಾಗದ ಬ್ಯಾಾಟರಾಯನಪುರ ಠಾಣಾ ವ್ಯಾಪ್ತಿಯ ಮೈಸೂರು ರಸ್ತೆ ನಾಯಂಡಹಳ್ಳಿ ಜಂಕ್ಷನ್ನಲ್ಲಿ ವ್ಯಕ್ತಿಯೊಬ್ಬರು ಸರ್ವೀಸ್ ಮಾಡಿಸಲು ಕಾರು ಶೋರೂಮ್ ಬಳಿ ನಿಲ್ಲಿಸಿದಾಗ ಕಳವು ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.