ಬೆಂಗಳೂರು: ಸದಾ ಬೆಂಗಳೂರನ್ನು ವಿರೋಧಿಸಿಕೊಂಡೇ ರಾಜಕಾರಣ ಮಾಡಿಕೊಂಡು ಬಂದಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಯಾವ ಕಾರಣಕ್ಕೆ ಬೆಂಗಳೂರಿಂದ ಸ್ಪರ್ಧೆಗೆ ಮುಂದಾಗಿದ್ದಾರೋ ಗೊತ್ತಿಲ್ಲ. ಅವರನ್ನು ಯಾವ ಕಾರಣಕ್ಕೂ ಬೆಂಗಳೂರು ಜನ ಒಪ್ಪಲ್ಲ. ಹಾಗಾಗಿ ಇಲ್ಲಿ ನಮ್ಮ ಅಭ್ಯರ್ಥಿ ಗೆಲುವು ಖಚಿತ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೇವೇಗೌಡರು ಬೆಂಗಳೂರಿಗೆ ಬರುತ್ತಿದ್ದಾರೆ ಎನ್ನುವುದು ಆಶ್ಚರ್ಯ ತಂದಿದೆ. ಅವರು ಜೀವನ ಪೂರ್ತಿ ಬೆಂಗಳೂರನ್ನು ವಿರೋಧಿಸಿಕೊಂಡು ಬಂದವರು. ಇವತ್ತು ಕೂಡ ಅವರದ್ದೇ ಸರ್ಕಾರವಿದೆ. ಇಡೀ ಬಜೆಟ್ ಹಾಸನ ಹಾಗೂ ಹೊಳೆನರಸಿಪುರದ ಪಾಲಾಗಿದೆ. ಬೆಂಗಳೂರು ಅಭಿವೃದ್ಧಿಯಾಗಿದ್ದು ಬಿಜೆಪಿ ಸರ್ಕಾರದಿಂದ. ಮೆಟ್ರೋ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ನಾಲ್ಕನೇ ಹಂತದ ಕಾವೇರಿ ಕುಡಿಯುವ ನೀರು ಸೇರಿ ಇತರೆ ಯೋಜನೆಗಳನ್ನು ಮಾಡಿದ್ದು ಬಿಜೆಪಿ. ಸದಾ ಬೆಂಗಳೂರನ್ನು ವಿರೋಧ ಮಾಡಿದ್ದ ಗೌಡರು ಈಗ ಬೆಂಗಳೂರು ಕಡೆ ಏಕೆ ಬರಲಿದ್ದಾರೆ ಎನ್ನುವುದೇ ಅಚ್ಚರಿ ಎಂದರು.
ಮಹಾನಗರದ ಜನ ಎಂದೂ ಜೆಡಿಎಸ್ಅನ್ನು ಬೆಂಬಲಿಸಿಲ್ಲ. ಬಿಬಿಎಂಪಿಯಲ್ಲೂ 14 ಸ್ಥಾನ ಮಾತ್ರ ಬಂದಿದ್ದು ಅದರಲ್ಲೂ 3 ಜನ ಬಿಟ್ಟು ಹೋಗಿದ್ದಾರೆ. ಈ ಎಲ್ಲಾ ದೃಷ್ಠಿಯಿಂದ ಬೆಂಗಳೂರು ನಗರದ ಮೂರಕ್ಕೆ ಮೂರು ಕ್ಷೇತ್ರಗಳಲ್ಲಿ ನಮ್ಮದೇ ಗೆಲುವು. ಹಿಂದೆಯೂ ನಾವೇ ಗೆದ್ದಿದ್ದೆವು, ಮುಂದೆಯೂ ನಾವೇ ಗೆಲ್ಲುತ್ತೇವೆ. ಬೆಂಗಳೂರು ಜನ ಯಾವತ್ತೂ ದೇವೇಗೌಡರನ್ನು ಇಷ್ಟಪಡಲ್ಲ. ಅವರ ಗೊಂದಲ ನೋಡಿದರೆ ಮತ್ತೆ ಹಾಸನಕ್ಕೆ ವಾಪಸ್ ಹೋಗುತ್ತಾರೆ ಅನ್ನಿಸುತ್ತದೆ ಎಂದರು.
ಹೈವೋಲ್ಟೇಜ್ ಕದನದಲ್ಲಿ ಜೆಡಿಎಸ್ ಗೆಲ್ಬಾರ್ದು..!
ಮಂಡ್ಯ ಹೈವೋಲ್ಟೇಜ್ ಕ್ಷೇತ್ರ. ನಿಖಿಲ್ ಅವರ ಸ್ಪರ್ಧೆ ಜನರಿಗೆ ಬೇಸರ ತರಿಸಿದೆ. ಆ ಪಕ್ಷ ಒಬ್ಬ ಕಾರ್ಯಕರ್ತರನ್ನು ಬೆಳೆಸಲಿಲ್ಲ. ಕಾವೇರಿ ನೀರಿಗಾಗಿ ಅಂಬರೀಶ್ ಕೇಂದ್ರ ಸಚಿವ ಸ್ಥಾನ ತೊರೆದು ಕ್ಷೇತ್ರಕ್ಕೆ ಅಭಿವೃದ್ಧಿ ಮಾಡಿದ್ದಾರೆ. ಅಂಬಿ ಅಂತಮ ದರ್ಶನಕ್ಕೆ ಬಂದ ಜನಸಾಗರವೇ ಅವರ ಮೇಲಿನ ಪ್ರೇಮಕ್ಕೆ ಕಾರಣ. ಇಂದು ಸುಮಲತಾ ಸ್ಪರ್ಧೆ ಅವರ ವೈಯಕ್ತಿಕ ಅಲ್ಲ ಅದು ಜನರ ಅಭಿಪ್ರಾಯ. ಈಗಾಗಲೇ ಕಾಂಗ್ರೆಸ್ ಅವರಿಗೆ ಟಿಕೆಟ್ ನಿರಾಕರಿಸಿದೆ.
ಇದೀಗ ಅವರು ಪಕ್ಷೇತರ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡುವ ಘೋಷಣೆ ಮಾಡಲಿದ್ದಾರೆ. ಆಗ ಬಿಜೆಪಿ ಬೆಂಬಲ ಕೊಡಬೇಕಾ ಬೇಡವಾ ಎಂದು ನಿರ್ಧಾರ ಪ್ರಕಟಿಸಲಿದೆ. ಈಗಾಗಲೇ ಈ ಸಂಬಂಧ ಯಡಿಯೂರಪ್ಪ ಹಾಗೂ ಹೈಕಮಾಂಡ್ ಜೊತೆ ಚರ್ಚೆ ಮಾಡುತ್ತಿದ್ದೇವೆ. ಆದಷ್ಟು ಬೇಗ ತೀರ್ಮಾನ ಮಾಡುತ್ತೇವೆ. ಎಸ್.ಎಂ. ಕೃಷ್ಣ ಭೇಟಿ ವೇಳೆಯೂ ಚರ್ಚಿಸಿದ್ದೇನೆ. ಒಟ್ಟಿನಲ್ಲಿ ಜೆಡಿಎಸ್ ಅಲ್ಲಿ ಗೆಲ್ಲಬಾರದು ಎಂದರು.