ಬೆಂಗಳೂರು: ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶವಾಗಿದೆ. ಅದಕ್ಕಾಗಿ ವಿವಿಧ ಜಿಲ್ಲೆಗಳಂತೆಯೇ ಬೆಂಗಳೂರು ನಗರ ಕೂಡಾ ಮಳೆಯಿಂದಾಗುವ ಸಮಸ್ಯೆಗಳನ್ನ ಎದುರಿಸಲು ಸಜ್ಜಾಗುತ್ತಿದೆ. ಬೆಂಗಳೂರು ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಹವಾಮಾನ ಇಲಾಖೆ ಅಧಿಕಾರಿಗಳ ಜೊತೆ ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಎರಡು ಸುತ್ತಿನ ಸಭೆ ನಡೆಸಿದ್ದಾರೆ.
ಬೇಜವಾಬ್ದಾರಿ ತೋರಿಸುವ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲು ಸಹ ಸಿಎಂ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಬೆಂಗಳೂರಲ್ಲಿ ಮಳೆ, ಪ್ರವಾಹ ತುರ್ತು ಪರಿಸ್ಥಿತಿ ನಿಭಾಯಿಸಲು 500 ಜನರ ಸಿವಿಲ್ ಡಿಫೆನ್ಸ್ ತಂಡ ಸಜ್ಜಾಗಿದೆ. ಇದರ ಖರ್ಚು, ವೆಚ್ಚವನ್ನು ಬಿಬಿಎಂಪಿ ನಿಭಾಯಿಸಲಿದೆ.
ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಅಡಿ ರಾಜ್ಯಕ್ಕೆ ಒಂದು ಗ್ರೂಪ್ ಮಾಡಿ, ಮಳೆ ಬಂದಾಗ ಯಾವ ಜಿಲ್ಲೆಯಲ್ಲಿ ಸಮಸ್ಯೆ ಆಗುತ್ತದೆಯೋ, ಅಲ್ಲಿ ಪರಿಹರಿಸಲು ಸೆಕ್ರೆಟರಿ ಹಾಗೂ ಇಲಾಖಾ ಮುಖ್ಯಸ್ಥರನ್ನು ನೇಮಕ ಮಾಡಿ ಮೇಲುಸ್ತುವಾರಿ ಮಾಡಲಾಗುವುದು. ಪ್ರವಾಹ ಸಂದರ್ಭದಲ್ಲಿ ಜನರನ್ನು ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಿಸಲು ಶಾಲೆ, ಕಲ್ಯಾಣ ಮಂಟಪಕ್ಕೆ ಕಳಿಸುವ ಬದಲು ತಾತ್ಕಾಲಿಕ ಶೆಡ್‌ಗಳ ಬದಲು ಶಾಶ್ವತವಾಗಿ ಕಟ್ಟಡ ನಿರ್ಮಾಣ ಮಾಡಲಾಗುವುದು. ವಿಪತ್ತು ನಿರ್ವಹಣಾ ತಂಡಕ್ಕೆ 3,010 ಕೋಟಿ ರೂ. ಮೀಸಲಿಡಲಾಗಿದೆ. 10-15 ಕೋಟಿ ವೆಚ್ಚದಲ್ಲಿ ಎಲ್ಲಾ ಸೌಲಭ್ಯಗಳಿರುವ ಪುನರ್ವಸತಿ ಕೇಂದ್ರಗಳನ್ನು ಬೆಂಗಳೂರು, ಮಡಿಕೇರಿ, ಮಂಗಳೂರು ಸೇರಿ ಅಗತ್ಯವಿರುವ ಕಡೆ ನಿರ್ಮಾಣ ಮಾಡಲಾಗುವುದು ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಕರ್ನಾಟಕ ಡಿಸಾಸ್ಟರ್ ಮ್ಯಾನೇಜ್‌ಮೆಂಟ್‌ನಿಂದ ಪ್ರತಿದಿನ ಪ್ರವಾಹ ಆಗುವ ಸ್ಥಳಗಳು, ಗಾಳಿಯ ವೇಗ, ಯಾವ ಏರಿಯಾದಲ್ಲಿ ಅಲರ್ಟ್ ಇರಬೇಕು ಎಂದು ವರದಿ ತರಿಸಿಕೊಳ್ಳಲಾಗುತ್ತದೆ. ಈಗಾಗಲೇ ನಗರಕ್ಕೆ ಬೆಂಗಳೂರು ಮೇಘ ಸಂದೇಶ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಜನರು ಮಳೆಗೆ ಸಿಲುಕದೆ ಸುರಕ್ಷಿತವಾಗಿರಲು ಈ ಆ್ಯಪ್ ಬಳಸಲು ತಿಳಿಸಲಾಗಿದೆ. ನಗರದಲ್ಲಿ ಎಂಟು ವಲಯಗಳನ್ನು ಮಾಡಿ ಎಸಿಪಿ ಮಟ್ಟದ ಅಧಿಕಾರಿ, ಬಿಬಿಎಂಪಿ ಜಂಟಿ ಆಯುಕ್ತರು, ಬೆಸ್ಕಾಂ, ಜಲಮಂಡಳಿ, ಅರಣ್ಯ ವಿಭಾಗದ ತಂಡ ರಚಿಸಲಾಗಿದೆ. ಪ್ರತಿದಿನ ಹವಾಮಾನ ವರದಿ ಗಮನಿಸಿ ಪ್ರವಾಹ ಪರಿಸ್ಥಿತಿಯ ಕುರಿತು ಅಲರ್ಟ್ ನೀಡಲಾಗುತ್ತದೆ. 210 ಪ್ರವಾಹ ಸೂಕ್ಷ್ಮ ಪ್ರದೇಶಗಳಿವೆ. 21 ಸ್ಥಳಗಳಲ್ಲಿ ರಾಜಕಾಲುವೆಗಳಿಗೆ ಸೆನ್ಸಾರ್ ಅಳವಡಿಸಲಾಗಿದೆ. 75% ನೀರು ತುಂಬಿದಾಗ ಅಲಾರಾಂ ಆಗಲಿದೆ. ಕೂಡಲೇ ಪ್ರವಾಹ ಪರಿಸ್ಥಿತಿ ತಡೆಯಲಾಗುವುದು ಎಂದು ಮಾಹಿತಿ ನೀಡಿದರು.