ಕರ್ನಾಟಕ

karnataka

ETV Bharat / state

ಅತೀ ಹೆಚ್ಚು ಆ್ಯಸಿಡ್ ದಾಳಿ ಸಂತ್ರಸ್ತರನ್ನು ಹೊಂದಿದ ನಗರವಾದ ಬೆಂಗಳೂರು

Acid attack cases in Bengaluru: 2022 ಒಂದರಲ್ಲೇ ಏಳು ಆ್ಯಸಿಡ್ ದಾಳಿ ಪ್ರಕರಣಗಳಿಂದ 7 ಸಂತ್ರಸ್ತರನ್ನು ಹೊಂದಿರುವ ದೆಹಲಿ ಎರಡನೇ ಸ್ಥಾನದಲ್ಲಿದ್ದು, ಐವರು ಸಂತ್ರಸ್ತರನ್ನು ಹೊಂದಿರುವ ಅಹಮದಾಬಾದ್ ಮೂರನೇ ಸ್ಥಾನದಲ್ಲಿದೆ.

Bengaluru
ಬೆಂಗಳೂರು

By ETV Bharat Karnataka Team

Published : Dec 11, 2023, 12:41 PM IST

ಬೆಂಗಳೂರು: ದೇಶದಲ್ಲಿ ದಾಖಲಾದ ಆ್ಯಸಿಡ್ ದಾಳಿ ಪ್ರಕರಣಗಳ ಪೈಕಿ ಅತಿ ಹೆಚ್ಚು ಸಂತ್ರಸ್ತರನ್ನು ಹೊಂದಿರುವ ನಗರವೆಂಬ ಕುಖ್ಯಾತಿಗೆ ಬೆಂಗಳೂರು ಒಳಗಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಇತ್ತೀಚೆಗೆ ಬಿಡುಗಡೆ ಮಾಡಿದ ಅಪರಾಧ ಪ್ರಕರಣಗಳ ವರದಿಯಲ್ಲಿ ಈ ಆತಂಕಕಾರಿ ವಿಚಾರ ಬಯಲಾಗಿದೆ.

ಎನ್‌ಸಿಆರ್‌ಬಿ ವರದಿಯಲ್ಲಿ ಪಟ್ಟಿ ಮಾಡಲಾದ 19 ಮೆಟ್ರೋಪಾಲಿಟನ್ ನಗರಗಳ ಪೈಕಿ, ಕಳೆದ ವರ್ಷ ಆರು ಆ್ಯಸಿಡ್ ದಾಳಿ ಪ್ರಕರಣಗಳಿಂದ 8 ಸಂತ್ರಸ್ತರನ್ನು ಹೊಂದಿರುವ ಬೆಂಗಳೂರು ನಂಬರ್ ಒನ್ ಸ್ಥಾನದಲ್ಲಿದೆ. 2022 ಒಂದರಲ್ಲೇ ಏಳು ಆ್ಯಸಿಡ್ ದಾಳಿ ಪ್ರಕರಣಗಳಿಂದ 7 ಸಂತ್ರಸ್ತರನ್ನು ಹೊಂದಿರುವ ದೆಹಲಿ ಎರಡನೇ ಸ್ಥಾನದಲ್ಲಿದೆ. ಮತ್ತು ಐದು ಪ್ರಕರಣಗಳಿಂದ ಐವರು ಸಂತ್ರಸ್ತರನ್ನು ಹೊಂದಿರುವ ಅಹಮದಾಬಾದ್ ಮೂರನೇ ಸ್ಥಾನದಲ್ಲಿದೆ.

ಎನ್‌ಸಿಆರ್‌ಬಿ ಡೇಟಾ ಮಾಹಿತಿಯನುಸಾರ ಕಳೆದ ವರ್ಷ ಬೆಂಗಳೂರಿನಲ್ಲಿ ಮೂರು ಮಹಿಳೆಯರ ಮೇಲೆ ಆ್ಯಸಿಡ್ ದಾಳಿ ಯತ್ನ ಪ್ರಕರಣಗಳು ದಾಖಲಾಗಿವೆ. ಹೈದರಾಬಾದ್ ಮತ್ತು ಅಹಮದಾಬಾದ್‌ನಲ್ಲಿ 2022 ರಲ್ಲಿ ಎರಡು ಆ್ಯಸಿಡ್ ದಾಳಿ ಯತ್ನ ಪ್ರಕರಣಗಳು ದಾಖಲಾಗಿವೆ.

ಕಳೆದ ವರ್ಷ ಕೆಲಸಕ್ಕೆ ಹೋಗುತ್ತಿದ್ದ 24 ವರ್ಷದ ಯುವತಿಯ ಮೇಲೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಆ್ಯಸಿಡ್ ದಾಳಿ ನಡೆದಿತ್ತು. ಪೊಲೀಸರ ಪ್ರಕಾರ, ಆರೋಪಿಯು ಹಲವು ವರ್ಷಗಳಿಂದ ಮಹಿಳೆಯನ್ನು ಹಿಂಬಾಲಿಸುತ್ತಿದ್ದ. ಮದುವೆಗೆಂದು ಆಕೆಯನ್ನು ಪೀಡಿಸುತ್ತಿದ್ದ. ಆದರೆ ಆತನ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಕ್ಕೆ ಆಕೆಯ ಮೇಲೆ ಆ್ಯಸಿಡ್ ಎರಚಿದ್ದನು. ಬಳಿಕ ತಿರುವಣ್ಣಾಮಲೈ ಆಶ್ರಮದಲ್ಲಿ ಸ್ವಾಮಿ ವೇಶದಲ್ಲಿದ್ದ ಆರೋಪಿಯನ್ನು ಬಂಧಿಸಲಾಗಿತ್ತು. ಇದೇ ವರ್ಷ ಜೂನ್‌ನಲ್ಲಿ ಸಂತ್ರಸ್ತ ಯುವತಿಗೆ ತಮ್ಮ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಿದ್ದರು.

ವಿವಾಹಿತ ಮಹಿಳೆಗೆ ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ ವ್ಯಕ್ತಿಯೊಬ್ಬ ಆಕೆಯ ಮೇಲೆ ಆ್ಯಸಿಡ್ ಅಂಶವಿರುವ ಟಾಯ್ಲೆಟ್ ಕ್ಲೀನರ್ ಎರಚಿದ್ದ ಘಟನೆ ಕಳೆದ ವರ್ಷ ಜೂನ್‌ನಲ್ಲಿ ಬೆಂಗಳೂರಿನ ಸಾರಕ್ಕಿ ಬಳಿ ನಡೆದಿತ್ತು. ಅಗರಬತ್ತಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ, ಅದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಪ್ರೀತಿಸುತ್ತಿದ್ದ. ಮದುವೆಯಾಗಿ ಒಂದು ಮಗುವಿದ್ದ ಆಕೆಗೆ ತನ್ನನ್ನು ಮದುವೆಯಾಗುವಂತೆ ದುಂಬಾಲು ಬಿದ್ದಿದ್ದ. ಮದುವೆಯಾಗಲು ಒಪ್ಪದಿದ್ದಾಗ ಆಕೆಯ ಮೇಲೆ ಆ್ಯಸಿಡ್ ಅಂಶವಿರುವ ಟಾಯ್ಲೆಟ್ ಕ್ಲೀನರ್ ಎರಚಿ ಪರಾರಿಯಾಗಿದ್ದ. ತೀವ್ರವಾಗಿ ಕಣ್ಣು ಹಾಗೂ ಮುಖದ ಮೇಲೆ ಗಾಯವಾಗಿದ್ದ ಮಹಿಳೆಯನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ‌ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಇದನ್ನೂ ಓದಿ:ಚಿಕ್ಕಮಗಳೂರು: ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಆ್ಯಸಿಡ್ ದಾಳಿ

ABOUT THE AUTHOR

...view details