ಬೆಂಗಳೂರು: ಹಾಡಹಗಲೇ ವೃದ್ಧೆಯ ಕೈ ಕಾಲು ಕಟ್ಟಿ ಮನೆಯಲ್ಲಿದ್ದ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ರೌಡಿ ಕುಮಾರ ಅಲಿಯಾಸ್ ಲೊಡ್ಡೆ ಕುಮಾರ (30) ಎಂಬುವನನ್ನು ಪೊಲೀಸರು ಬಂಧಿಸಿದ್ದು, ಇನ್ನುಳಿದ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ. ಜನವರಿ 9ರಂದು ರಾಜರಾಜೇಶ್ವರಿ ನಗರದ ಗೌರಮ್ಮ ಎಂಬುವವರ ಮನೆಗೆ ನುಗ್ಗಿದ್ದ ಆರೋಪಿಗಳ ತಂಡ, ಆಕೆಯ ಕೈಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ದರೋಡೆ ಮಾಡಿ ಪರಾರಿಯಾಗಿದ್ದರು.
ಜನವರಿ 9ರ ಸಂಜೆ ಮೊಮ್ಮಕ್ಕಳನ್ನು ಟ್ಯೂಷನ್‌ಗೆ ಬಿಟ್ಟು ಮನೆಗೆ ಬಂದಿದ್ದ ಗೌರಮ್ಮ ಮನೆಯ ಬಾಗಿಲು ಒಳಗೆ ಹೋಗುವಷ್ಟರಲ್ಲಿ ಬಂದಿದ್ದ ದರೋಡೆಕೋರರು, ಮನೆಯ ಬಾಗಿಲು ಲಾಕ್ ಮಾಡಿ, ಆಕೆಯ ಕೈಕಾಲು ಕಟ್ಟಿ ಬಾಯಿಗೆ ಮಂಕಿ ಕ್ಯಾಪ್ ತುರುಕಿದ್ದರು. ಬಳಿಕ ಮನೆಯಲ್ಲಿದ್ದ 120 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ, 50 ಸಾವಿರ ನಗದು ದರೋಡೆ ಮಾಡಿ ಎಸ್ಕೇಪ್ ಆಗಿದ್ದರು.
ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ರಾಜರಾಜೇಶ್ವರಿ ನಗರ ಠಾಣಾ ಪೊಲೀಸರು ಸದ್ಯ ಓರ್ವ ಆರೋಪಿಯನ್ನು ಬಂಧಿಸಿದ್ದು, ಆತನಿಂದ ಕದ್ದ ಮಾಲನ್ನ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗೆ ಸಾಥ್ ನೀಡಿದ್ದ ಇನ್ನಳಿದ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಲಾಗುವುದೆಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್ ಗಿರೀಶ್ ತಿಳಿಸಿದ್ದಾರೆ.