ಬೆಂಗಳೂರು: ಕೆಲವು ಜನರು ಒಳಚರಂಡಿ ಮಾರ್ಗವನ್ನು ಮಣ್ಣು ಹಾಕಿ ಮುಚ್ಚಿದ್ದರಿಂದ ಶುಕ್ರವಾರ ಸುರಿದ ಮಳೆಗೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇ ಮುಳುಗಡೆಯಾಗಿತ್ತು ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (ಎನ್ಹೆಚ್ಎಐ) ತಿಳಿಸಿದೆ. ಇದೇ ವೇಳೆ ನಿನ್ನೆ ತುರ್ತು ಕಾಮಗಾರಿ ನಡೆಸಿದ್ದು, ಸಮಸ್ಯೆ ಬಗೆಹರಿಸಿದೆ.
NHAI ಸ್ಪಷ್ಟನೆ: ಕರ್ನಾಟಕದಲ್ಲಿ ಶುಕ್ರವಾರ ರಾತ್ರಿ ಅಧಿಕ ಮಳೆ ಸುರಿದಿದೆ. ಸಾಮಾನ್ಯ 0.1 ಮಿ.ಮೀ ಬದಲಾಗಿ 3.9 ಮಿ ಮೀ ಮಳೆಯಾಗಿದೆ. ಪರಿಣಾಮ ಪ್ರಾಣಿಗಳ ಓಡಾಟಕ್ಕಾಗಿ ನಿರ್ಮಿಸಿರುವ ಮೇಲ್ಸೇತುವೆಯ ಕೆಳಗೆ (ಕಿಲೋ ಮೀಟರ್ 42.640 ರಲ್ಲಿ) ಜನರು ಒಳಚರಂಡಿ ಮಾರ್ಗವನ್ನು ನಿರ್ಬಂಧಿಸಿದ್ದರಿಂದ ಮುಳುಗಡೆಯಾಗಿದೆ. ಮಾದಾಪುರ ಮತ್ತು ಇತರ ಸುತ್ತಮುತ್ತಲ ಭಾಗಗಳಲ್ಲಿ ತಮ್ಮ ಕೃಷಿ ಜಮೀನು ಮತ್ತು ಗ್ರಾಮಕ್ಕೆ ಕಿಲೋ ಮೀಟರ್ 42+640 ರಲ್ಲಿ ಪ್ರವೇಶಿಸಲು 3 ಮೀಟರ್ ಅಗಲದವರೆಗೆ ಚರಂಡಿಯನ್ನು ಮಣ್ಣಿನಿಂದ ಮುಚ್ಚಲಾಗಿತ್ತು. ಆ ಮೂಲಕ ಸರ್ವಿಸ್ ರಸ್ತೆಯಿಂದ ತಮ್ಮದೇ ಆದ ಮಾರ್ಗವನ್ನು ನಿರ್ಮಿಸುವ ಮೂಲಕ ರಸ್ತೆ ಕಡಿತ ಮಾರ್ಗ ಮಾಡಿಕೊಂಡಿದ್ದರು. ಪ್ರಾಣಿಗಳ ಓಡಾಟಕ್ಕಿರುವ ಮೇಲ್ಸೇತುವೆಯ ಕೆಳಗೆ ಅವ್ಯಾಹತ ಮಳೆ ಸುರಿದಾಗ ಮುಳುಗಡೆಯಾಗಿದೆ.
ಜನರ ಪ್ರವೇಶಕ್ಕಾಗಿ ನಿರ್ಮಿಸಿದ್ದ ದಂಡೆಯನ್ನು ಶನಿವಾರ ಮುಂಜಾನೆಯೇ ತೆರವುಗೊಳಿಸಲಾಗಿದೆ. ಮಾದಾಪುರ ಗ್ರಾಮದ ಅಕ್ಕಪಕ್ಕದ ಹೊಲಗಳಿಗೆ ಅನುಕೂಲವಾಗುವಂತೆ 1.2 ಮೀ ಡಯಾ ಪೈಪ್‌ನ ಎರಡು ಸಾಲುಗಳನ್ನು ಪೈಪ್ ಡ್ರೈನ್ ಮೂಲಕ ಒದಗಿಸಲು ನಿರ್ಧರಿಸಲಾಗಿದೆ. ಈ ಕಾಮಗಾರಿ ಶನಿವಾರ ಮಧ್ಯರಾತ್ರಿ ಪೂರ್ಣಗೊಂಡಿದೆ ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.
ಪ್ರತಾಪ್ ಸಿಂಹ ಟ್ವೀಟ್: "ಬಹುಶಃ ಬೈದು, ಟೀಕಿಸಿ, ಕುಹಕವಾಡಿ ಮುಗಿಯಿತು ಅಂದುಕೊಳ್ತೀನಿ. ಮಳೆ ನೀರು ಹೋಗುವ ಚರಂಡಿಯನ್ನು ಯಾರೋ ರಸ್ತೆ ಮಾಡಿಕೊಳ್ಳಲು ಅನಧಿಕೃತವಾಗಿ ಮುಚ್ಚಿದ್ದರಿಂದ ಮೈಸೂರು-ಬೆಂಗಳೂರು ಹೆದ್ದಾರಿ ಕೆಲಕಾಲ ಈಜುಕೊಳವಾಗಿತ್ತು. ಎರಡು Hume Pipe ಹಾಕಿ ಸರಿಪಡಿಸಿದ್ದೇವೆ. ಧನ್ಯವಾದಗಳು" ಎಂದು ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.