ಕರ್ನಾಟಕ

karnataka

ETV Bharat / state

ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್​ ವೇ ಅಸಲಿಮುಖ ಕಳಚಿಬಿದ್ದಿದೆ- ಅನಿತಾ ಕುಮಾರಸ್ವಾಮಿ - ಡಬಲ್ ಎಂಜಿನ್ ಕೇಂದ್ರ ರಾಜ್ಯ ಬಿಜೆಪಿ ಸರ್ಕಾರ

ಸರ್ವಿಸ್ ರಸ್ತೆ ಸೇರಿದಂತೆ ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಕಾಮಗಾರಿ ಪೂರ್ಣ ಮುಗಿಯುವವರೆಗೆ ಟೋಲ್ ಸಂಗ್ರಹಿಸಬಾರದು ಎಂದು ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

anita kumaraswamy
ಶಾಸಕಿ ಅನಿತಾ ಕುಮಾರಸ್ವಾಮಿ

By

Published : Mar 18, 2023, 4:43 PM IST

ಬೆಂಗಳೂರು: ಡಬಲ್ ಎಂಜಿನ್ ಕೇಂದ್ರ ರಾಜ್ಯ ಬಿಜೆಪಿ ಸರ್ಕಾರಗಳು, ಈ ದಶಪಥ ಹೆದ್ದಾರಿ ನಮ್ಮ ಹೆಮ್ಮೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿಯ ಅಸಲಿಮುಖ ಮತ್ತೊಮ್ಮೆ ಕಳಚಿ ಬಿದ್ದಿದೆ ಎಂದು ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಬೆಳಗಿನಜಾವ ಸುರಿದ ಒಂದು ಸಣ್ಣ ಮಳೆಗೇ ಅದು ಕೆರೆಯಾಗಿ, ಚರಂಡಿಯಾಗಿ ಉಕ್ಕಿ ಹರಿದಿದೆ. ಕಳೆದ ವರ್ಷ ಅಬ್ಬರಿಸಿದ ಮಹಾಮಳೆಗೆ ಈ ಎಕ್ಸ್ ಪ್ರೆಸ್ ಹೆದ್ದಾರಿ ತತ್ತರಿಸಿತ್ತು.

ಕಾಮಗಾರಿಗಳು ಮುಗಿದಿರಲಿಲ್ಲ ಎಂದು ಹೇಳಿ ಗುತ್ತಿಗೆದಾರರು ಆಗ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದರು. ಈಗ ವರ್ಷ ಮುಗಿಯುವ ಮೊದಲೇ ಮತ್ತೆ ಬಂದ ಸಣ್ಣಮಳೆಗೆ ಸಾವಿರಾರು ಕೋಟಿ ವೆಚ್ಚದ ಈ ಹೆದ್ದಾರಿ ವಾಹನ ಸವಾರರ ಪಾಲಿಗೆ ಸಾವಿನ ಮಾರಿ ಆಗಿ ಮಾರ್ಪಟ್ಟಿದೆ ಎಂದು ಟೀಕಿಸಿದ್ದಾರೆ.

ಅವೈಜ್ಞಾನಿಕವಾಗಿರುವ ಈ ಯೋಜನೆಯ ಕಾಮಗಾರಿಗಳನ್ನು ಪೂರ್ಣಗೊಳಿಸಿದೆಯೇ, ತರಾತುರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ ಮಾಡಿಸಿದ ಈ ' ಚುನಾವಣಾ ಗಿಮಿಕ್ ' ಬಗ್ಗೆ ಜನರು ಹಾದಿಬೀದಿಯಲ್ಲಿ ಆಡಿಕೊಳ್ಳುತ್ತಿದ್ದಾರೆ. ವಾಹನ ಸವಾರರು ಶಪಿಸುತ್ತಿದ್ದಾರೆ. ಇದಕ್ಕೆ ಉತ್ತರದಾಯಿಗಳು ಯಾರು? ಎಂದು ಅವರು ಟ್ವೀಟ್​ದಲ್ಲಿ ಪ್ರಶ್ನಿಸಿದ್ದಾರೆ.

ಬೆಳಗಿನಜಾವ ಸುರಿದ ಮಳೆಯಿಂದ ಹೆದ್ದಾರಿಯಲ್ಲಿ ನೀರು ಆಳೆತ್ತರ ನಿಂತಿದೆ. ವಾಹನಗಳು ಅಪಘಾತಕ್ಕೀಡಾಗಿ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದಾರೆ. 270 ರೂ ಟೋಲ್ ಕಟ್ಟಿ ಹೆದ್ದಾರಿಗೆ ಬಂದ ವಾಹನ ಸವಾರರು ಮಳೆ ಚಳಿಯಲ್ಲಿ ಜೀವವನ್ನು ಅಂಗೈಯಲ್ಲಿ ಇಟ್ಟುಕೊಂಡು ನರಳಿದ್ದಾರೆ. ಇದು ನಿಜಕ್ಕೂ ನೋವಿನ ಸಂಗತಿ ಎಂದು ವ್ಯಂಗ್ಯವಾಗಿ ಕುಟುಕಿದ್ದಾರೆ.

80ಕ್ಕೂ ಹೆಚ್ಚು ಜನರು ಸಾವು:ಕೆಲ ದಿನಗಳ ಹಿಂದೆ ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ವಾಹನದಲ್ಲಿದ್ದ ದಂಪತಿಯ ಹಣ, ಚಿನ್ನಾಭರಣವನ್ನು ದೋಚಿದ್ದ ಪ್ರಕರಣ ವರದಿಯಾಗಿತ್ತು. ಜತೆಗೆ, ನಿರಂತರ ಅಪಘಾತಗಳಿಂದ 80ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಹಾಗಾದರೆ, ಈ ಹೆದ್ದಾರಿಯ ಭದ್ರತೆ, ಸುರಕ್ಷತೆ ಪಾಡೇನು? ಟೋಲ್ ಸಂಗ್ರಹ ಮಾಡಿದರೆ ಸಾಕೇ?, ನನ್ನ ಒತ್ತಾಯ ಇಷ್ಟೇ. ಸರ್ವಿಸ್ ರಸ್ತೆಯೂ ಸೇರಿದಂತೆ ಈ ಹೆದ್ದಾರಿಯ ಎಲ್ಲಾ ಬಾಕಿ ಬಿದ್ದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಅಲ್ಲಿಯವರೆಗೂ ಟೋಲ್ ಸಂಗ್ರಹ ನಿಲ್ಲಿಸಬೇಕು. ಈ ರಸ್ತೆಗಾಗಿ ಭೂಮಿ ಕಳೆದುಕೊಂಡಿರುವ ರಾಮನಗರ, ಮಂಡ್ಯ ಸೇರಿ ಆ ಭಾಗದ ಎಲ್ಲ ಜನರು ಮುಕ್ತವಾಗಿ ಸಂಚರಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಮೈಸೂರು- ಬೆಂಗಳೂರು ದಶಪಥ ಟೀಕೆಗೆ ಸಿಎಂ ಬೊಮ್ಮಾಯಿ ಸ್ಪಷ್ಟನೆ:ರಾಷ್ಟ್ರೀಯ ಹೆದ್ದಾರಿ ಸಂಬಂಧಿತ ಪ್ರಶ್ನೆಗೆ ಚಾಮರಾಜನಗರದಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಮೈಸೂರು ಎಕ್ಸ್​ಪ್ರೆಸ್ ವೇ ಇಡೀ ದೇಶವೆ ಹೆಮ್ಮೆ ಪಡಬೇಕಾದ ಕಾಮಗಾರಿ, ಇಡೀ ದೇಶವೇ ಮೈಸೂರಿಗೆ ಕನೆಕ್ಟ್ ಆಗಲಿದ್ದು, ಇಂಥ ಮಹತ್ವದ ಕೆಲಸಗಳಿಗೆ ಪ್ರಧಾನಿ ಮೋದಿ ಅವರನ್ನು ಕರೆಸದೇ ಬೇರೆ ಯಾವುದಕ್ಕೆ ಕರೆಸಬೇಕು?

ಮೊದಲ ಮಳೆ ಬಂದ ಬಳಿಕ ಸಣ್ಣಪುಟ್ಟ ಸಮಸ್ಯೆ ಆಗಲಿದ್ದು, ಶೀಘ್ರವೇ ಎಲ್ಲ ಸಮಸ್ಯೆ ನಿವಾರಣೆ ಆಗಲಿದೆ. ಅಲ್ಲಲ್ಲಿ ಆಗಿರುವ ಎಲ್ಲ ಗೊಂದಲಗಳನ್ನು ಬಗೆಹರಿಸಲಾಗುವುದು ಎಂದು ಸಿಎಂ ಇದೇ ವೇಳೆ ಭರವಸೆ ನೀಡಿದ್ದಾರೆ. ಇದೇ ವೇಳೆ ವಿಪಕ್ಷಗಳ ಟೀಕೆಗೂ ಸಿಎಂ ತಿರುಗೇಟು ಕೊಟ್ಟಿದ್ದಾರೆ.

ಇದನ್ನೂಓದಿ:ದೇವೇಗೌಡರನ್ನು ಭೇಟಿ ಮಾಡಿದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ: ರಾಜಕೀಯ ಮಾತನಾಡಿಲ್ಲ ಎಂದ ಹೆಚ್​ಡಿಕೆ

ABOUT THE AUTHOR

...view details