ಬೆಂಗಳೂರು:ಗಾಂಧೀಜಿ ಅಂದರೆ ಸೌಮ್ಯ ಸ್ವಭಾವದ ವ್ಯಕ್ತಿತ್ವ. ನ್ಯಾಯಕ್ಕಾಗಿ ಸತ್ಯಾಗ್ರಹ ಎಂಬ ಅಮೂಲಾಗ್ರ ಪ್ರಖರ ನೀತಿ ಹುಟ್ಟುಹಾಕಿದ ಮಹನೀಯ. ಇಂದು ಬಾಪೂಜಿಯ ಜಯಂತಿ ಹಿನ್ನೆಲೆ ನಗರದ ಹಲವೆಡೆ ಇರುವ ಗಾಂಧಿ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ ಸ್ಮರಿಸಲಾಗುತ್ತಿದೆ.
ಅಂದಹಾಗೇ, ಬೆಂಗಳೂರಿನಲ್ಲಿ ಸಾವಿರಾರು ಗಾಂಧಿ ಪ್ರತಿಮೆಗಳಿವೆ. ಆದರೆ ಕೆಲವು ಏರಿಯಾಗಳು, ಸರ್ಕಲ್ಗಳು ಪ್ರಸಿದ್ಧಿ ಪಡೆದಿದ್ದೇ ಈ ಗಾಂಧಿ ಪ್ರತಿಮೆಗಳಿಂದ.
ನಗರದಲ್ಲಿ ಜನತೆ ಅನ್ಯಾಯವನ್ನು ಪ್ರಶ್ನಿಸಬೇಕಾದರೂ, ತಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳಬೇಕಾದರೂ ಮೊದಲಿಗೆ ಗುಂಪು ಸೇರೋದು ಗಾಂಧಿ ಪ್ರತಿಮೆ ಬಳಿ. ಅದರಲ್ಲಿ ಪ್ರಮುಖ ಏರಿಯಾ ಅಂದರೆ ಮೌರ್ಯ ಸರ್ಕಲ್. ವಾರ್ಡ್ ನಂ 94 ಗಾಂಧಿನಗರದಲ್ಲಿ ಇರುವ ಗಾಂಧಿ ಪ್ರತಿಮೆಯನ್ನು 1997 ನವೆಂಬರ್ 7 ರಂದು ಅಂದಿನ ಪಾಲಿಕೆ ಸದಸ್ಯ ಅಶೋಕ್. ಬಿ ದಾನಿ ನೇತೃತ್ವದಲ್ಲಿ ನಿರ್ಮಾಣ ಮಾಡಲಾಗಿತ್ತು.
ಅಂದಿನಿಂದ ಇಂದಿನವರೆಗೆ ಯಾವುದೇ ಮುಷ್ಕರ, ಪ್ರತಿಭಟನೆ ನಡೆದೂ ಇದೇ ಗಾಂಧಿ ಪ್ರತಿಮೆಯ ಹತ್ತಿರ ನಡೆಯುತ್ತಿದೆ. ಇಂದಿಗೂ ಹಲವರ ಧ್ವನಿಯಾಗಿರುವ ಗಾಂಧಿ ಪ್ರತಿಮೆಗೆ ಹೂವಿನ ಹಾರ ಹಾಕಿ ನಂತರ ಮುಂದಿನ ಕಾರ್ಯಕ್ರಮ ಶುರುವಾಗುವುದು.