ಬೆಂಗಳೂರು : ಅತಿ ವೇಗ ಅಪಾಯಕ್ಕೆ ಆಹ್ವಾನ ಎಂದು ಅರಿತಿದ್ದರೂ ಎಚ್ಚೆತ್ತುಕೊಳ್ಳದ ಲಾರಿ ಚಾಲಕ ರಸ್ತೆ ವಿಭಜಕಕ್ಕೆ ಗುದ್ದಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಬೈಕ್ ಸವಾರನ ಸಾವಿಗೆ ಕಾರಣನಾಗಿರುವ ಘಟನೆ ನಡೆದಿದೆ. ಯಮ ಸ್ವರೂಪಿ ಲಾರಿಗೆ ಸವಾರ ಬಲಿಯಾಗಿದ್ದಲ್ಲದೆ, ರಸ್ತೆ ಬದಿಯಲ್ಲಿದ್ದ ಅಂಗಡಿಗೂ ರಭಸದಿಂದ ಲಾರಿ ಗುದ್ದಿದ ಪರಿಣಾಮ ಅಂಗಡಿಯ ಶೆಡ್ ಸೇರಿ ಇನ್ನಿತರ ವಸ್ತುಗಳಿಗೆ ಹಾನಿಯಾಗಿ ಚೆಲ್ಲಾಪಿಲ್ಲಿಯಾಗಿವೆ.
ಇಂದು ಬೆಳಗ್ಗೆ ನಸುಕಿನಲ್ಲಿ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಗಡಿ ರೋಡ್ ಬಳಿ ದುರ್ಘಟನೆ ಸಂಭವಿಸಿದೆ. ದುರ್ಘಟನೆಯಲ್ಲಿ ಬೈಕ್ ಸವಾರ ಸೋಮಶೇಖರ್ ಎಂಬವವರು ಮೃತಪಟ್ಟಿದ್ದಾರೆ. ಮರದ ದಿಮ್ಮಿಗಳನ್ನು ತುಂಬಿಕೊಂಡು ಬೆಳಗಿನಜಾವ ಸುಮಾರು 2.30 ವೇಳೆ ನೈಸ್ ರಸ್ತೆಯಿಂದ ಸುಂಕದಕಟ್ಟೆಗೆ ಲಾರಿಯೊಂದು ಬರುತ್ತಿತ್ತು. ಈ ವೇಳೆ ಅತಿವೇಗವಾಗಿ ಲಾರಿ ಚಲಾಯಿಸುತ್ತಿದ್ದ ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆ.
ಇದರಿಂದ ರಸ್ತೆ ವಿಭಜಕಕ್ಕೆ ಲಾರಿ ಗುದ್ದಿದೆ. ಬಳಿಕ ಎದುರುಗಡೆ ಬರುತ್ತಿದ್ದ ಬೈಕ್ ಸವಾರ ಸೋಮಶೇಖರ್ ಅವರಿಗೂ ಗುದ್ದಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸೋಮಶೇಖರ್ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದು, ಮೃತದೇಹವನ್ನು ವಿಕ್ಟೋರಿಯಾ ಅಸ್ಪತ್ರೆಗೆ ರವಾನಿಸಲಾಗಿದೆ. ಮತ್ತೊಂದೆಡೆ ವೇಗವಾಗಿ ಬಂದಿದ್ದ ಲಾರಿ ಬೈಕ್ಗೆ ಗುದ್ದಿದ ಪರಿಣಾಮ ಪಕ್ಕದಲ್ಲಿದ್ದ ಅಂಗಡಿಯ ಶೆಡ್ಗಳು ಮುರಿದುಬಿದ್ದಿವೆ. ಅಲ್ಲದೆ ಮೃತನ ಸ್ಕೂಟರ್ ಕೂಡ ಸಂಪೂರ್ಣ ಜಖಂ ಆಗಿದೆ.
ಇದನ್ನೂ ಓದಿ :Mysore Road Accident: ಕಾರು ಮತ್ತು ಬಸ್ ಮುಖಾಮುಖಿ ಡಿಕ್ಕಿ; ಗ್ರಾಮಪಂಚಾಯಿತಿ ಸದಸ್ಯ ಸಾವು, ಮೂವರಿಗೆ ಗಂಭೀರ ಗಾಯ
ಇನ್ನು, ಈ ದುರ್ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಬಳಿಕ ಕ್ರೇನ್ ಮೂಲಕ ಲಾರಿಯನ್ನು ಸ್ಥಳಾಂತರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಅಪಘಾತ ಎಸಗಿದ ಲಾರಿ ಚಾಲಕನನ್ನು ಬಂಧಿಸಿ ವಿಚಾರಣೆಗೊಳಪಡಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಸ್ತೆಬದಿ ನಿಂತಿದ್ದ ಕ್ಯಾಂಟರ್ಗೆ ಹಿಂಬದಿಯಿಂದ ಕಾರು ಡಿಕ್ಕಿ; ತಾಯಿ ಮಗ ಮೃತ :ಕೊಪ್ಪಳ ತಾಲೂಕಿನ ಮಂಗಳಪುರ ರಾಷ್ಟ್ರೀಯ ಹೆದ್ದಾರಿ ಬಳಿ ನಿಂತಿದ್ದ ಲಾರಿಗೆ ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ತಾಯಿ ಹಾಗೂ ಮಗ ಮೃತಪಟ್ಟಿರುವ ಘಟನೆ ಜೂನ್ 12 ರಂದು ಸೋಮವಾರ ರಾತ್ರಿ ನಡೆದಿತ್ತು. ಮೃತರನ್ನು ಗದಗ ಜಿಲ್ಲೆಯ ರೋಣ ತಾಲೂಕಿನ ಗಜೇಂದ್ರಗಡದ ಪುಟ್ಟರಾಜು ವಸ್ತ್ರದ(46) ಹಾಗೂ ಗಂಗಮ್ಮ ವಸ್ತ್ರದ(70) ಎಂದು ಗುರುತಿಸಲಾಗಿತ್ತು. ಮೃತರು ಗಜೇಂದ್ರಗಡದಿಂದ ಕೊಪ್ಪಳ ಮಾರ್ಗವಾಗಿ ಹೊಸಪೇಟೆಗೆ ಬೈಕ್ನಲ್ಲಿ ತೆರಳುತ್ತಿದ್ದರು. ತಾಲೂಕಿನ ಮಂಗಳಾಪುರ ಬಳಿ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಲಾರಿಗೆ ದ್ವಿಚಕ್ರ ವಾಹನವು ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ತಾಯಿ ಮತ್ತು ಮಗನ ತಲೆಗೆ ಗಂಭೀರ ಪೆಟ್ಟಾಗಿ ರಕ್ತಸ್ರಾವದಿಂದ ಬಳಲಿ ಸ್ಥಳದಲ್ಲೇ ಮೃತಪಟ್ಟಿದ್ದರು. ಇನ್ನು, ಈ ಸಂಬಂಧ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :Koppal Terrible Road Accident: ಕೊಪ್ಪಳದ ವಿವಿಧಡೆ ಭೀಕರ ರಸ್ತೆ ಅಪಘಾತ: ಒಟ್ಟು ಐವರು ಸಾವು