ಬೆಂಗಳೂರು :ಮಹಾಮಾರಿಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ಸಿಲಿಕಾನ್ ಸಿಟಿ ಇಂದು ರಾತ್ರಿ 8ಗಂಟೆಯಿಂದ ಬರುವ 22ನೇ ದಿನಾಂಕ (ಸೋಮವಾರ)ದವರೆಗೆ ಸ್ತಬ್ಧವಾಗಲಿದೆ.
ಹೀಗಾಗಿ ಪೊಲೀಸರು ಸದ್ಯ ನಗರದ ಎಲ್ಲಾ ಸಿಗ್ನಲ್, ಅಡ್ಡರಸ್ತೆ, ಪ್ರಮುಖ ರಸ್ತೆಗಳ ಬಳಿ ಬ್ಯಾರಿಕೇಡ್ ಅಳವಡಿಕೆ ಮಾಡಿ ರಸ್ತೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ. ಬೆಂಗಳೂರು ನಗರ ಮಾತ್ರವಲ್ಲದೇ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೂಡಾ ಇಂದು ರಾತ್ರಿ 8ಗಂಟೆಯಿಂದ ಕಂಪ್ಲೀಟ್ ಲಾಕ್‌ಡೌನ್ ಆಗಿದೆ. ಸದ್ಯ ಹೆದ್ದಾರಿ ರಸ್ತೆಯಲ್ಲಿ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಕಾರ್ಯಾಚರಣೆ ಶುರು ಮಾಡಿದ್ದಾರೆ.
ಇಂದಿನಿಂದ ಜಾರಿಯಾಗಿರುವ ಕಠಿಣ ಲಾಕ್‌ಡೌನ್ ವೇಳೆ ಪೊಲೀಸರ ಭದ್ರತೆ ಬಹಳ ಪ್ರಾಮುಖ್ಯತೆ ಆಗಿರುತ್ತದೆ. ಹೀಗಾಗಿ, ಈಗಾಗಲೇ ಎಲ್ಲಾ ಠಾಣೆಗಳಲ್ಲಿ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಸಿಬ್ಬಂದಿಯನ್ನು ಸಜ್ಜು ಮಾಡಿದ್ದು, ಇಂದು ರಾತ್ರಿಯಿಂದಲೇ ಕೈಗೊಳ್ಳಬೇಕಾದ ಕ್ರಮದ ಕುರಿತು ಸೂಚನೆ ನೀಡಿದ್ದಾರೆ.
ಸದ್ಯ ನಗರದಲ್ಲಿ ವಾಹನ ಸವಾರರ ಓಡಾಟಕ್ಕೆ ಕಡಿವಾಣ ಹಾಕಿದ್ದು, ನಗರದಿಂದ ಹೊರ ಹೋಗುವ ಮೈಸೂರು ರಸ್ತೆ, ತುಮಕೂರು ರಸ್ತೆ, ಕೋಲಾರ ಕನಕಪುರ ರಸ್ತೆ ಎಲ್ಲಾ ಗಡಿ ಭಾಗಗಳು ಬಂದ್ ಆಗಿ 144ಸೆಕ್ಷನ್ ಕೂಡಾ ಜಾರಿಯಲ್ಲಿದೆ.
ಮತ್ತೊಂದೆಡೆ ಸಿಟಿಯ ಇನ್ಸ್‌ಪೆಕ್ಟರ್ ಹಾಗೂ ಹೊಯ್ಸಳ ಸಿಬ್ಬಂದಿ ಗಸ್ತು ತಿರುಗುತ್ತಾ ವಿನಾಕಾರಣ ಓಡಾಟ ಮಾಡಬೇಡಿ ಎಂದು ಮೈಕ್ ಮೂಲಕ ತಿಳಿಸಿದ್ದಾರೆ. ಸದ್ಯ ಜನರ ಓಡಾಟ ಬಹುತೇಕ ಕಡಿಮೆಯಾಗಿದೆ.