ಬೆಂಗಳೂರು: ಲಾಕ್ಡೌನ್ ಹಿನ್ನೆಲೆಪಕ್ಷ ಸಂಘಟನೆ, ಸದಸ್ಯತ್ವ ನೋಂದಣಿ ಹಾಗೂ ಮುಂದಿನ ಚುನಾವಣೆಗಳ ಸಿದ್ಧತೆ ಬಗ್ಗೆ ಸಮಾಲೋಚಿಸಲು ಕರೆಯಲಾಗಿದ್ದ ಸಭೆಗಳನ್ನು ಜೆಡಿಎಸ್ ರದ್ದುಗೊಳಿಸಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರ ಲಾಕ್ಡೌನ್ ಜಾರಿಗೊಳಿಸಿರುವ ಹಿನ್ನೆಲೆ ಈ ವಾರ ನಡೆಸಬೇಕಿದ್ದ ಜಿಲ್ಲಾವಾರು ಸಭೆಗಳನ್ನು ಮುಂದೂಡಲಾಗಿದೆ.
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ನೇತೃತ್ವದಲ್ಲಿ ಕಳೆದ ವಾರ ಪಕ್ಷದ ಮುಖಂಡರ ಸಭೆಗಳನ್ನು ಆರಂಭಿಸಲಾಗಿತ್ತು. ಈಗಾಗಲೇ ಬೆಂಗಳೂರು ನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಮುಖಂಡರ ಸಭೆ ನಡೆಸಲಾಗಿತ್ತು.
ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಹಿನ್ನೆಲೆ ಆಯಾ ಜಿಲ್ಲೆಯ ಮುಖಂಡರ ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಮುಂಬರುವ ಬಿಬಿಎಂಪಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಇತ್ತೀಚೆಗೆ ನಗರದ ಮುಖಂಡರ ಸಭೆ ನಡೆಸಿ ದೇವೇಗೌಡರು ಸೂಚನೆ ನೀಡಿದ್ದರು. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಕೊರೊನಾ ನಿಯಂತ್ರಣ, ಚಿಕಿತ್ಸೆ ಕುರಿತಂತೆ ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ನಡೆಸಲು ಉದ್ದೇಶಿಸಿದ ಪ್ರತಿಭಟನೆಯನ್ನು ಸಹ ಸದ್ಯಕ್ಕೆ ಕೈಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.