ಬೆಂಗಳೂರು:ವಿವಿಧ ಕಾರಣಗಳಿಗಾಗಿ ನ್ಯಾಯಾಲಯದ ಕಲಾಪದಿಂದ ಹೊರಗುಳಿದಿದ್ದ ಮಂಡ್ಯ ಮತ್ತು ದಾವಣಗೆರೆ ಜಿಲ್ಲೆಯ 6 ವಕೀಲರ ಸಂಘಗಳ ವಿರುದ್ಧ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈಬಿಡುವಂತೆ ಬೆಂಗಳೂರು ವಕೀಲರ ಸಂಘ ಮನವಿ ಮಾಡಿ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದೆ.
ವಕೀಲರ ಸಂಘಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಡುವಂತೆ ಪತ್ರ - Bangalore Lawyers Association
ವಿವಿಧ ಕಾರಣಗಳಿಗಾಗಿ ನ್ಯಾಯಾಲಯದ ಕಲಾಪದಿಂದ ಹೊರಗುಳಿದಿದ್ದ ಮಂಡ್ಯ ಮತ್ತು ದಾವಣಗೆರೆ ಜಿಲ್ಲೆಯ 6 ವಕೀಲರ ಸಂಘಗಳ ವಿರುದ್ಧ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈಬಿಡುವಂತೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಅವರಿಗೆ ಪತ್ರ ಬರೆದಿರುವ ಬೆಂಗಳೂರು ವಕೀಲರ ಸಂಘ ಮಾತುಕತೆಯ ಮೂಲಕ ಸಮಸ್ಯೆ ಇತ್ಯರ್ಥಪಡಿಸುವಂತೆ ಕೋರಿದ್ದಾರೆ.

ಈ ಬಗ್ಗೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಅವರಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್ ಮತ್ತು ಪ್ರಧಾನ ಕಾರ್ಯದರ್ಶಿ ಎ.ಎನ್. ಗಂಗಾಧರಯ್ಯ, ಕೂಡಲೇ ನ್ಯಾಯಾಂಗ ನಿಂದನೆ ಕ್ರಮವನ್ನು ಹಿಂತೆಗೆದುಕೊಂಡು ಮಾತುಕತೆಯ ಮೂಲಕ ಸಮಸ್ಯೆ ಇತ್ಯರ್ಥಪಡಿಸುವಂತೆ ಕೋರಿದ್ದಾರೆ. ನ್ಯಾಯಾಂಗ ನಿಂದನೆಯ ಈ ಕ್ರಮ ನ್ಯಾಯಾಂಗದ ಆಕ್ರಮಣ ಎಂದೆನಿಸಿಕೊಳ್ಳುತ್ತದೆ. ನ್ಯಾಯಾಂಗದ ಕಡೆಯಿಂದ ನೀವು ಕೈಗೊಂಡಿರುವ ನಿರ್ಧಾರ ಸರಿ ಇರಬಹುದು, ಆದರೆ ಹೈಕೋರ್ಟ್ ಇಂತಹ ತೀವ್ರತರನಾದ ಹೆಜ್ಜೆ ಇಡಬಾರದಿತ್ತು ಎಂದಿದ್ದಾರೆ.
ಅಲ್ಲದೆ, ವಕೀಲರು (ಬಾರ್) ಮತ್ತು ನ್ಯಾಯಮೂರ್ತಿಗಳು (ಬೆಂಚ್) ನ್ಯಾಯಾಂಗದ ಎರಡು ಗಾಲಿಗಳಿದ್ದಂತೆ, ಒಂದಿಲ್ಲದೆ ಇನ್ನೊಂದು ಚಲಿಸುವುದು ಸಾಧ್ಯವಿಲ್ಲ. ನ್ಯಾಯಾಂಗದ ಮುಖ್ಯಸ್ಥರಾಗಿರುವ ನೀವು ಎರಡರ ನಡುವೆ ಸಮತೋಲನ ಕಾಯ್ದುಕೊಂಡು ಮುನ್ನಡೆಸಬೇಕಾಗಿದೆ. ವಕೀಲರ ಸಂಘಗಳು ಅನಿವಾರ್ಯ ಕಾರಣಗಳಿಂದಾಗಿ ನ್ಯಾಯಾಲಯದಿಂದ ಹೊರಗುಳಿದಿವೆ. ಹಾಗಾಗಿ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಿರುವುದು ಸರಿಯಲ್ಲ, ಕೂಡಲೇ ನಿಂದನೆ ಕ್ರಮವನ್ನು ವಾಪಸ್ಸು ಪಡೆಯಬೇಕು ಮತ್ತು ಕಾನೂನು ರೀತಿಯಲ್ಲಿ ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಲು ಮುಂದಾಬೇಕು ಎಂದು ಸಂಘ ಮುಖ್ಯ ನ್ಯಾಯಮೂರ್ತಿಗಳಿಗೆ ಒತ್ತಾಯಿಸಿದೆ.