ಬೆಂಗಳೂರು: ನಗರದಲ್ಲಿ 2 ದಿನಗಳ ಕಾಲ ನಡೆಯಲಿರುವ 11ನೇ ಇಂಡಿಯಾ ನ್ಯಾನೋ ಸಮಾರಂಭದ ಉದ್ಘಾಟನಾ ಸಮಾರಂಭದಲ್ಲಿ ಭಾರತ ರತ್ನ ಪ್ರೊ.ಸಿಎನ್ಆರ್ ರಾವ್ ಮಾತನಾಡಿ, ಕರ್ನಾಟಕ ರಾಜ್ಯ ಸಾಕಷ್ಟು ವರ್ಷದಿಂದ ವಿಜ್ಞಾನ ಅದರಲ್ಲೂ ನ್ಯಾನೋ ತಂತ್ರಜ್ಞಾನಕ್ಕೆ ಮಹತ್ವ ನೀಡಿದೆ. ಬೆಂಗಳೂರು ವಿಜ್ಞಾನದ ರಾಜಧಾನಿ ಎಂದು ಸಂತಸ ವ್ಯಕ್ತಪಡಿಸಿದರು.
11ನೇ ಇಂಡಿಯಾ ನ್ಯಾನೋ ಸಮಾರಂಭ 70 ವರ್ಷಗಳ ಕಾಲ ವಿಜ್ಞಾನದಲ್ಲಿ ತೊಡಗಿಸಿಕೊಂಡಿದ್ದೇನೆ. ಪ್ರಸ್ತುತವಾಗಿ ನ್ಯಾನೋ ತಂತ್ರಜ್ಞಾನ ಮೆಡಿಸಿನ್ ಕ್ಷೇತ್ರದಲ್ಲಿ , ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರೆದಿದೆ ಎಂದು ಸಿಎನ್ಆರ್ ರಾವ್ ತಿಳಿಸಿದರು.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾತನಾಡಿ, ಬೆಂಗಳೂರು ತಂತ್ರಜ್ಞಾನದ ಕೇಂದ್ರ ಎಂದು ಹೆಸರುವಾಸಿಯಾಗಿದೆ. ಭಾರತ ರತ್ನ ಸಿಎನ್ಆರ್ ರಾವ್ ನೇತೃತ್ವದಲ್ಲಿ ಬೆಂಗಳೂರು ಹಾಗೂ ಭಾರತ ನ್ಯಾನೋ ತಂತ್ರಜ್ಞಾನದಲ್ಲಿ ಮುಂದುವರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ಸರ್ಕಾರ ಸದೃಢ ನ್ಯಾನೋ ತಂತ್ರಜ್ಞಾನಕ್ಕೆ ಒತ್ತು ನೀಡುತ್ತದೆ. ಈ ಉದಯೋನ್ಮುಖ ತಂತ್ರಜ್ಞಾನಕ್ಕೆ ಬೇಕಾದ ಎಲ್ಲ ಸಹಾಯವನ್ನು ಸರ್ಕಾರ ಮಾಡಲಿದೆ ಎಂದು ಯಡಿಯೂರಪ್ಪ ತಿಳಿಸಿದರು.
ಸಮಾರಂಭದಲ್ಲಿ ಪ್ರತಿಷ್ಠಿತ ಪ್ರೊ.ಸಿಎನ್ಆರ್ ರಾವ್ ಪ್ರಶಸ್ತಿಯನ್ನು ಪ್ರೊ. ಬಿ.ಎಸ್ ಅನಿಲ್ ಕುಮಾರ್ ಅವರಿಗೆ ನೀಡಿ ಪುರಸ್ಕರಿಸಿದರು. ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ, ಐಟಿ-ಬಿಟಿ ಕಾರ್ಯದರ್ಶಿ ರಮಣ ರೆಡ್ಡಿ, ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಉಪಸ್ಥಿತರಿದ್ದರು.