ಬೆಂಗಳೂರು: ಕೋವಿಡ್ ಸೋಂಕು ವಿರುದ್ಧದ ಹೋರಾಟದಲ್ಲಿ ವೈದ್ಯರು ಸೇರಿದಂತೆ ಆಸ್ಪತ್ರೆ ಸಿಬ್ಬಂದಿಯ ಪಾತ್ರ ಮಹತ್ವದ್ದು. ಕೋವಿಡ್ ಸಂದರ್ಭದಲ್ಲಿ ಹೆಚ್ಚಿನ ಆಸ್ಪತ್ರೆಗಳನ್ನು ಸೋಂಕಿತರ ಚಿಕಿತ್ಸೆಗಾಗಿಯೇ ಇರಿಸಿದ್ದರಿಂದ ಅದೆಷ್ಟೋ ಕಡೆಗಳಲ್ಲಿ ಹೊರರೋಗಿಗಳು ಚಿಕಿತ್ಸೆಗಾಗಿ ಹರಸಾಹಸ ಪಡುವಂತಾಗಿತ್ತು. ಆದ್ರೆ ರಾಜ್ಯ ರಾಜಧಾನಿಯಲ್ಲಿ ಅಂತಹ ಸಮಸ್ಯೆಗಳು ಉದ್ಭವಿಸಲಿಲ್ಲ. ಕಾರಣವೇನು ಗೊತ್ತಾ? ಇಲ್ಲಿದೆ ಕೆಲ ಮಾಹಿತಿ.
ಸರ್ಕಾರಿ ಆಸ್ಪತ್ರೆಗಳ ವಾತಾವರಣ:
ಸರ್ಕಾರಿ ಆಸ್ಪತ್ರೆನಾ ಎಂದು ಮೂಗು ಮುರಿಯುವ ಕಾಲ ಒಂದಿತ್ತು. ಆದ್ರೀಗ ಎಲ್ಲ ವರ್ಗದವರು ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಾರೆ. ಕೋವಿಡ್ ಬಂದ ಮೇಲೊಂತೂ ಸರ್ಕಾರಿ ಆಸ್ಪತ್ರೆಗಳ ವಾತಾವರಣವೇ ಬದಲಾಗಿ ಹೋಗಿದೆ. ಬೇಕಾದ ಉತ್ತಮ ವೈದ್ಯಕೀಯ ಸೇವೆಗಳೀಗ ಸರ್ಕಾರಿ ಆಸ್ಪತ್ರೆಗಳಲ್ಲೇ ಲಭ್ಯವಿದೆ.
ಕೋವಿಡ್ ಕಾರಣಕ್ಕೆ ಹೊರ ರೋಗಿಗಳಿಗೆ ಪ್ರತ್ಯೇಕ ವ್ಯವಸ್ಥೆ, ವೈದ್ಯರ ಪ್ರತಿಕ್ರಿಯೆ ಹೇಗಿದೆ ಸದ್ಯದ ಪರಿಸ್ಥಿತಿ?
ಈ ಹಿಂದೆ ಹೊರ ರೋಗಿಗಳು ಸರತಿ ಸಾಲಿನಲ್ಲಿ ನಿಲ್ಲುವ ಸ್ಥಿತಿ ಎದುರಾಗಿತ್ತು. ಒಪಿಡಿ ಕಾರ್ಡ್ ಪಡೆಯುವ ಸಮಯದಿಂದ ಆರಂಭಗೊಂಡು ವೈದ್ಯರ ಬಳಿ ತೋರಿಸಿಕೊಳ್ಳಲು, ಔಷಧಿಗಳನ್ನು ಪಡೆಯಲು ಸಹ ಕ್ಯೂ ನಿಲ್ಲಬೇಕಾಗಿತ್ತು. ಆದ್ರೀಗ ಪರಿಸ್ಥಿತಿ ಬದಲಾಗಿದೆ. ಇದೀಗ ಒಪಿಡಿ ಕಾರ್ಡ್ ಬದಲಿಗೆ ಕಿರು ಪುಸ್ತಕವನ್ನು 10-20 ರೂಪಾಯಿ ಕೊಟ್ಟು ಪಡೆದುಕೊಂಡರೆ, ನೇರವಾಗಿ ವೈದ್ಯರನ್ನು ಭೇಟಿ ಮಾಡಬಹುದು. ತಿಂಗಳಿಗೊಮ್ಮೆ ಬಿಪಿ, ಬ್ಲಡ್, ಶುಗರ್, ಥೈರಾಯ್ಡ್, ಕೋಲಾಸ್ಟ್ರಲ್ನ ರೋಟಿನ್ ಚೆಕ್ ಅಪ್ ಮಾಡಿಸಿಕೊಳ್ಳಲು ಸಹ ಪ್ರತ್ಯೇಕ ದಿನ ನೀಡುವುದರಿಂದ ಅಂತಹವರಿಗೂ ಯಾವುದೇ ತೊಂದರೆ ಇಲ್ಲ.
ಮನೆಮದ್ದಿಗೆ ಹೊಂದಿಕೊಂಡ ಬೆಂಗಳೂರು ಜನತೆ:
ಕೊರೊನಾ ವೈರಸ್ ಬಂದಾಗಿನಿಂದ ಜನರು ಸಣ್ಣ-ಪುಟ್ಟ ಕಾಯಿಲೆಗೆ ಆಸ್ಪತ್ರೆಗೆ ಹೋಗುವ ಪ್ರವೃತ್ತಿಯನ್ನು ಕಡಿಮೆ ಮಾಡಿದ್ದಾರೆ. ಆದಷ್ಟು ಮನೆಯಲ್ಲಿಯೇ ಔಷಧಿ ಮಾಡಿಕೊಳ್ಳುವ ಮೂಲಕ ಆಸ್ಪತ್ರೆಗೆ ಹೋಗುವುದನ್ನು ಕೈ ಬಿಟ್ಟಿದ್ದಾರೆ. ತೀರಾ ಅನಿವಾರ್ಯ ಹಾಗೂ ಆರೋಗ್ಯ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದರಷ್ಟೇ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಕೋವಿಡ್ ಚಿಕಿತ್ಸೆಯನ್ನು ನೀಡುತ್ತಿರುವುದರಿಂದ ಜನರು ಹೆಚ್ಚಾಗಿ ಆಸ್ಪತ್ರೆಗೆ ಹೋಗುವುದನ್ನು ಕಡಿಮೆ ಮಾಡಿದ್ದಾರೆಂದು ತಿಳಿದುಬಂದಿದೆ.
ಹೊರರೋಗಿಗಳಿಗೆ ಚಿಕಿತ್ಸೆ:
ಇದರ ಹೊರತಾಗಿ ಪ್ರತಿ ತಿಂಗಳು ಪರೀಕ್ಷೆಗೆ ಒಳಗಾಗುತ್ತಿದ್ದ ಡಯಾಬಿಟಿಸ್ ರೋಗಿಗಳು, ಬಿಪಿ ಸಂಬಂಧಿಸಿದ ಪರೀಕ್ಷೆ ಸೇರಿದಂತೆ ಇತರೆ ಚಿಕಿತ್ಸೆಗೆ ರೋಗಿಗಳು ಬರುತ್ತಿದ್ದಾರೆ.
ವೈದ್ಯರ ಮಾತೇನು?
ಈ ಸಂಬಂಧ ಪ್ರತಿಕ್ರಿಯಿಸಿರುವ ಕೆ.ಸಿ. ಜನರಲ್ ಆಸ್ಪತ್ರೆಯ ಡಾ. ವೆಂಕಟೇಶ್, ಕೋವಿಡ್ ಪೂರ್ವದಲ್ಲೂ, ನಂತರವೂ ಹೊರ ವಿಭಾಗವನ್ನು ತೆರೆದಿದ್ದು, ಬರುವ ರೋಗಿಗಳಿಗೆ ಚಿಕಿತ್ಸೆಯನ್ನ ನೀಡುತ್ತಾ ಬಂದಿದ್ದೇವೆ. ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆ ಆಗಿರುವ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹೊರರೋಗಿಗಳು ಬರುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ:ರಾಜ್ಯದಲ್ಲಿಂದು 349 ಹೊಸ ಕೋವಿಡ್ ಪ್ರಕರಣ: 5 ಮಂದಿ ಬಲಿ
ನಮ್ಮ ಆಸ್ಪತ್ರೆಯಲ್ಲೇ ಕಳೆದ ಕೆಲ ಸಮಯದ ಹಿಂದೆ ಪ್ರತಿನಿತ್ಯ 700-800 ಮಂದಿ ಹೊರ ರೋಗಿಗಳಾಗಿ ಬರುತ್ತಿದ್ದಾರೆ. ಈ ಹಿಂದೆ ಕನಿಷ್ಠ ಅಂದರೂ 1,000ಕ್ಕೂ ಹೆಚ್ಚು ಜನರು ಬರುತ್ತಿದ್ದರು, ಇದೀಗ ನಿಧಾನವಾಗಿ ಕೋವಿಡ್ನಿಂದ ಯಥಾಸ್ಥಿತಿಗೆ ಹೋಗುತ್ತಿದ್ದೇವೆ. ಕೋವಿಡ್-ನಾನ್ ಕೋವಿಡ್, ಒಳರೋಗಿಗಳು ಹಾಗೂ ಹೊರರೋಗಿಗಳ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.