ಬೆಂಗಳೂರು : ಕಳೆದ ಗುರುವಾರ ರಾತ್ರಿ ಮೇಖ್ರಿ ಸರ್ಕಲ್ ಬಳಿ ಅಪಘಾತವೊಂದು ನಡೆದಿದ್ದು, ಪಾದಚಾರಿ ಮೃತಪಟ್ಟಿದ್ದರು. ಇದೀಗ ಬೆಂಜ್ ಕಾರ್ ಚಾಲಕನ ಹಿಟ್ ಆ್ಯಂಡ್ ರನ್ ಗೆ ಬಲಿಯಾದ ಪಾದಚಾರಿಯ ಸಂಪೂರ್ಣ ವಿಳಾಸ ಪತ್ತೆಯಾಗಿದೆ. ಮೃತನನ್ನು ಆರ್.ಟಿ. ನಗರದ ಚೋಳನಾಯಕನ ಹಳ್ಳಿ ನಿವಾಸಿ ಡಿ.ಎನ್. ವೆಂಕಟೇಶ್ ಎಂದು ಗುರುತಿಸಲಾಗಿದೆ. ಅಪಘಾತವೆಸಗಿದ್ದ ಕಾರು ಚಾಲಕ ಪರಾರಿಯಾಗಿದ್ದು, ಪೊಲೀಸರು ಆತನ ಬಂಧನಕ್ಕೆ ಹುಡುಕಾಟ ನಡೆಸುತ್ತಿದ್ದಾರೆ.
ಗುರುವಾರ ರಾತ್ರಿ ಮೇಖ್ರಿ ಸರ್ಕಲ್ ಬಳಿ ಆಟೋ ಇಳಿದು ಮನೆಗೆ ತೆರಳಲು ರಸ್ತೆ ದಾಟುತ್ತಿದ್ದ ವೆಂಕಟೇಶ್ ಗೆ ವೇಗವಾಗಿ ಬಂದ ಬೆಂಜ್ ಕಾರು ಡಿಕ್ಕಿಯಾಗಿತ್ತು, ಅಪಘಾತವಾದ ಕೂಡಲೇ ಸ್ಥಳೀಯರ ನೆರವಿನಿಂದ ಅಂಬ್ಯುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗೆ ಗಾಯಾಳು ವೆಂಕಟೇಶ್ ಅವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವೆಂಕಟೇಶ್ ಮೃತಪಟ್ಟಿದ್ದರು. ಪ್ರತ್ಯಕ್ಷದರ್ಶಿಗಳ ಮಾಹಿತಿಯನ್ವಯ ಸಿಸಿ ಕ್ಯಾಮರಾದ ದೃಶ್ಯಾವಳಿಗಳನ್ನು ಪರಿಶೀಲಿಸಿರುವ ಸದಾಶಿವನಗರ ಸಂಚಾರ ಠಾಣಾ ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಕರಳು ಹಿಂಡುವಂತಿದೆ ಮೃತ ವೆಂಕಟೇಶ್ ಕಥೆ: ತನಿಖೆ ವೇಳೆ ಮೃತ ವೆಂಕಟೇಶ್ ಕಥೆ ಕೇಳಿ ಪೊಲೀಸರ ಕಣ್ಣಂಚು ಒದ್ದೆಯಾಗಿತ್ತು. ವೆಂಕಟೇಶ್ ತನ್ನ ತಂದೆಯ ಸಾವಿನ ಬಳಿಕ ಮಾನಸಿಕವಾಗಿ ಕುಗ್ಗಿದ್ದರು. ಬಳಿಕ ತಾಯಿಯೊಂದಿಗೆ ವಾಸವಾಗಿದ್ದರು. ತಂದೆ ಅಗಲಿಕೆಯ ನೋವಲ್ಲಿದ್ದ ಇವರು ಸದಾ ತಂದೆಯ ಫೋಟೋ ಕೈಯಲ್ಲಿ ಹಿಡಿದು ಎಲ್ಲಾ ಕಡೆ ಓಡಾಡುತ್ತಿದ್ದರು. ಇನ್ನು, ಅಪಘಾತ ನಡೆಯುವ ದಿನ ತಮ್ಮ ಸೋದರನ ಮನೆಗೆ ತೆರಳಿದ್ದರು. ಆದರೆ ದುರ್ವಿಧಿ ರಸ್ತೆ ಅಪಘಾತದಲ್ಲಿ ವೆಂಕಟೇಶ್ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಅಪಘಾತದ ಬಳಿಕ ಮೃತನ ಬಗ್ಗೆ ಯಾವುದೇ ಸುಳಿವು ಪೊಲೀಸರಿಗೆ ಇರಲಿಲ್ಲ.