0ಬೆಂಗಳೂರು:ಭೀಕರ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿನಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಕೆಂಗೇರಿ ಮುಖ್ಯರಸ್ತೆಯ ಆರ್ವಿ ಕಾಲೇಜ್ ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಪಘಾತ ಪರಿಣಾಮ ಬಿಐಎಂಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿನಿ ಸ್ವಾತಿ (21) ಗಂಭೀರವಾಗಿ ಗಾಯಗೊಂಡಿದ್ದಾರೆ.
ಹುಬ್ಬಳ್ಳಿ ಮೂಲದ ಸ್ವಾತಿ ಪಟ್ಟಣಗೆರೆಯ ಪಿಜಿಯಲ್ಲಿ ವಾಸವಿದ್ದು, ಬಿಐಎಂಎಸ್ ಕಾಲೇಜಿನಲ್ಲಿ ಎಂಬಿಎ ಓದುತ್ತಿದ್ದಾರೆ. ಫೆಬ್ರವರಿ 2 ರ ಮಧ್ಯಾಹ್ನ 1.30ರ ಸುಮಾರಿಗೆ ಆರ್ವಿ ಕಾಲೇಜು ಕಡೆಯಿಂದ ಬಿಐಎಂಎಸ್ ಕಾಲೇಜು ಕಡೆಗೆ ರಸ್ತೆ ದಾಟುತ್ತಿದ್ದ ಸ್ವಾತಿಗೆ ಕೆಂಗೇರಿ ಕಡೆಯಿಂದ ವೇಗವಾಗಿ ಬರುತ್ತಿದ್ದ KA 51 MH 7575 ನಂಬರಿನ ಕಾರು ಡಿಕ್ಕಿಯಾಗಿದೆ. ಪರಿಣಾಮ ವಿದ್ಯಾರ್ಥಿನಿ ಸ್ವಾತಿಯ ತಲೆ, ಮೈ-ಕೈಗೆ ತೀವ್ರ ಗಾಯಗಳಾಗಿವೆ. ಕೂಡಲೇ ಸ್ಥಳೀಯರು ಸ್ವಾತಿಯ ರಕ್ಷಣೆಗೆ ಬಂದಿದ್ದು, ಗಾಯಾಳು ಸ್ವಾತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಈಗ ಸ್ವಾತಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ಅಪಘಾತ ಕುರಿತು ಸ್ವಾತಿ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿತ್ತು. ಸುದ್ದಿ ತಿಳಿದ ಅವರು ಕೂಡಲೇ ಹುಬ್ಬಳ್ಳಿಯಿಂದ ಪ್ರಯಾಣ ಬೆಳೆಸಿ ಮಗಳನ್ನು ಸೇರಿಸಿದ್ದಾರೆ.
ಚಾಲಕ ಕೆಂಗೇರಿ ಠಾಣಾ ಪೊಲೀಸರ ವಶಕ್ಕೆ: ಹಿಟ್ ಅಂಡ್ ರನ್ ಮಾಡಿ ತಲೆ ಮರೆಸಿಕೊಂಡಿದ್ದ ಕಾರು ಚಾಲಕ ಕೃಷ್ಣಭಾರ್ಗವ್ (20) ನನ್ನ ಕೆಂಗೇರಿ ಸಂಚಾರಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರ್ಆರ್ ಕಾಲೇಜಿನಲ್ಲಿ ಮೊದಲ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಆರೋಪಿ ಕೃಷ್ಣ ಭಾರ್ಗವ್ ಅಪಘಾತವೆಸಗಿದ ಬಳಿಕ ತಲೆಮರೆಸಿಕೊಂಡಿದ್ದರು. ಸದ್ಯ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.