ಬೆಂಗಳೂರು:ಕೆಂಗೇರಿ ಬಳಿಯ ತುರಹಳ್ಳಿ ಮೀಸಲು ಅರಣ್ಯದ ಬಿ ಎಂ ಕಾವಲು ಬಫರ್ ವಲಯದಲ್ಲಿ ಒತ್ತುವರಿ ಮಾಡಿದ್ದ 60 ಕೋಟಿ ರೂ ಮಾರುಕಟ್ಟೆ ಮೌಲ್ಯದ 6.5 ಎಕರೆ ಜಮೀನನ್ನು ವಶಕ್ಕೆ ಪಡೆಯಲಾಗಿದೆ.
ಹೊಸ ವರ್ಷದಲ್ಲಿ ಅರಣ್ಯ ಇಲಾಖೆಯ ಕಾರ್ಯ ಯೋಜನೆಗಳ ಬಗ್ಗೆ ನಿನ್ನೆ ಸಭೆ ನಡೆಸಿ ಉನ್ನತಾಧಿಕಾರಿಗಳಿಗೆ ಆದ್ಯತೆಯ ಮೇಲೆ ಒತ್ತುವರಿ ತೆರವು ಮಾಡಲು ಸಚಿವರು ಸೂಚಿಸಿದ ಹಿನ್ನೆಲೆ, ಬೆಳಗ್ಗೆ ಬಿ.ಎಂ. ಕಾವಲಿನಲ್ಲಿ ಜೆಸಿಬಿ ವಾಹನಗಳು ಗರ್ಜಿಸಿದವು.
ಒತ್ತುವರಿ ತೆರವು ಕಾರ್ಯಾಚರಣೆ: ಬೆಂಗಳೂರು ನಗರ ಡಿಸಿಎಫ್ ರವೀಂದ್ರಕುಮಾರ್, ಎಸಿಎಫ್ ಸುರೇಶ್ ಮತ್ತು ಆರ್ಎಫ್ ಓ ಗೋವಿಂದರಾಜ್ ಅವರ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ತಂಡ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡಿತು. ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್ನ್ನು ಜೆಸಿಬಿಗಳಿಂದ ನೆಲಸಮಗೊಳಿಸಲಾಯಿತು. ಅರಣ್ಯ ಭೂಮಿ ವಶಕ್ಕೆ ಪಡೆದು ಗಡಿಯಲ್ಲಿ ಬಿದಿರು ಸೇರಿದಂತೆ ನಾನಾ ಜಾತಿ ಮರಗಳನ್ನು ನೆಡುವ ಮೂಲಕ ಮರು ವಶಕ್ಕೆ ಪಡೆದರು.
ಈ ಅರಣ್ಯ ಪ್ರದೇಶದಲ್ಲಿ ಸುಮಾರು 6.5 ಎಕರೆಯಷ್ಟು ಭೂಮಿಯನ್ನು ಮಧುಸೂದನಾನಂದ ಸ್ವಾಮಿ ಎಂಬುವರು ಒತ್ತುವರಿ ಮಾಡಿ, ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದರು. ಅರಣ್ಯ ಭೂಮಿಯಾದ ಕಾರಣ ಯಾರಿಗೂ ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಅರಣ್ಯ ಇಲಾಖೆ ತಿರಸ್ಕರಿಸಿತ್ತು.
ನ್ಯಾಯಾಲಯ ಆದೇಶ: ಒತ್ತುವರಿದಾರರ ಬಳಿ ಅರಣ್ಯ ಭೂಮಿಗೆ ಸಂಬಂಧಿಸಿದಂತೆ ಯಾವುದೇ ಕಂದಾಯ ದಾಖಲೆ, ಕ್ರಯಪತ್ರ, ಮಂಜೂರಾತಿ ಪತ್ರ, ಸಾಗುವಳಿ ಚೀಟಿ ಯಾವುದೂ ಇಲ್ಲದ ಕಾರಣ 2017ರ ಆಗಸ್ಟ್ ನಲ್ಲಿ ಈ ಒತ್ತುವರಿ ತೆರವಿಗೆ ಎಸಿಎಫ್ ನ್ಯಾಯಾಲಯ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಸಿಸಿಎಫ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.
ಅರಣ್ಯ ಇಲಾಖೆ ಭೂಮಿ: 29.12.2023ರಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜ್ ಅವರು ಈ ಭೂಮಿ ಅರಣ್ಯ ಇಲಾಖೆಗೆ ಸಂಬಂಧಿಸಿದ್ದೆಂದು ಮಹತ್ವದ ಆದೇಶ ನೀಡಿದ್ದರು. ನಿನ್ನೆ ಅರಣ್ಯ ಸಚಿವ ಈಶ್ವರ ಖಂಡ್ರೆಯವರು ಬೆಂಗಳೂರು ಸುತ್ತಮುತ್ತ ಬೆಲೆ ಬಾಳುವ ಅರಣ್ಯ ಭೂಮಿ ಒತ್ತುವರಿಯಾಗಿದ್ದರೆ ಆದ್ಯತೆಯ ಮೇಲೆ ತೆರವು ಮಾಡುವಂತೆ ನಿರ್ದೇಶಿಸಿದ ಹಿನ್ನೆಲೆ ಇಂದು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಗಿದೆ. ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿರುವ ಮಧುಸೂದನಾನಂದ ಸ್ವಾಮಿ ಎಂಬುವರ ವಿರುದ್ಧ ಈಗಾಗಲೇ 5 ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರು ಸುತ್ತಮುತ್ತ ಭೂಮಿಗೆ ಬಂಗಾರದ ಬೆಲೆ ಇದೆ. ಕೆಲವರು ಕೋಟ್ಯಂತರ ರೂ. ಬೆಲೆಬಾಳುವ ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರೆ. ಪ್ರಕೃತಿ, ಪರಿಸರ, ಕಾಡು ಮತ್ತು ವನಸಂಪತ್ತು ಉಳಿಸುವುದೇ ಇಲಾಖೆಯ ಕರ್ತವ್ಯವಾಗಿದ್ದು, ಬೆಂಗಳೂರಿನಲ್ಲಿ ಆದೇಶ ಆಗಿರುವ ಪ್ರಕರಣಗಳಲ್ಲಿ ಒತ್ತುವರಿ ತೆರವು ಮಾಡಲು ಸ್ಪಷ್ಟ ಸೂಚನೆ ನೀಡಲಾಗಿದೆ.
ಇದನ್ನೂಓದಿ:'ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ'ಕ್ಕೆ ಡಿಕೆಶಿ ಚಾಲನೆ