ಕರ್ನಾಟಕ

karnataka

ETV Bharat / state

ಬೆಂಗಳೂರು ಹಬ್ಬದಿಂದ ರಾಜಧಾನಿಯ ಭಿನ್ನತೆ ವಿಶ್ವಕ್ಕೆ ಪರಿಚಯ: ಚಂದ್ರಶೇಖರ್​ ಕಂಬಾರ - ಕಂದಾಯ ಸಚಿವ ಆರ್​ ಆಶೋಕ್

ಎರಡು ದಿನಗಳ ಕಾಲ ಕಬ್ಬನ್​ ಪಾರ್ಕ್​ನಲ್ಲಿ ನಡೆಯುತ್ತಿರುವ ನಮ್ಮ ಬೆಂಗಳೂರು ಹಬ್ಬಕ್ಕೆ ಸಚಿವ ಆರ್​ ಅಶೋಕ್​ ಚಾಲನೆ ನೀಡಿದರು.

Inauguration of Namma Bangalore festival at Cubbon Park
ಕಬ್ಬನ್​ ಪಾರ್ಕ್​ನಲ್ಲಿ ನಮ್ಮ ಬೆಂಗಳೂರು ಹಬ್ಬ ಉದ್ಘಾಟನೆ

By

Published : Mar 25, 2023, 6:04 PM IST

ಕಬ್ಬನ್​ ಪಾರ್ಕ್​ನಲ್ಲಿ ನಮ್ಮ ಬೆಂಗಳೂರು ಹಬ್ಬ

ಬೆಂಗಳೂರು: ಬೆಂಗಳೂರು ನಗರ ವಿಶ್ವದ ಇತರೆ ನಗರಗಳಿಗಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ಬೆಂಗಳೂರು ಹಬ್ಬದ ಮೂಲಕ ತೋರ್ಪಡಿಸಲಾಗುತ್ತಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ್​ ಕಂಬಾರ ಅಭಿಪ್ರಾಯಪಟ್ಟಿದ್ದಾರೆ. ನಗರದ ಕಬ್ಬನ್​ ಉದ್ಯಾನವನದಲ್ಲಿ ಶನಿವಾರ ಮತ್ತು ಭಾನುವಾರ ನಡೆಯುವ ನಮ್ಮ ಬೆಂಗಳೂರು ಹಬ್ಬ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೆಂಗಳೂರಿನಲ್ಲಿ ವಿಭಿನ್ನ, ವಿಶೇಷ ವಾತಾವರಣದ ಜತೆಗೆ ಈ ತರಹದ ಹಬ್ಬವನ್ನು ನಾನು ಎಂದಿಗೂ ನೋಡಿರಲಿಲ್ಲ. ಈ ಹಬ್ಬವನ್ನು ನಾಡಹಬ್ಬದಂತೆ ಆಚರಿಸುತ್ತಿರುವ ಎಲ್ಲರಿಗೂ ಅಭಿನಂದನೆಗಳು. ಬೆಂಗಳೂರು ನಗರ ಕೆಂಪೇಗೌಡರ ಆಶಯದಂತೆ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಈ ಮಟ್ಟಕ್ಕೆ ಬೆಳೆಯುತ್ತದೆ ಎಂಬುದನ್ನು ಕನಸಿನಲ್ಲಿಯೂ ತಿಳಿದಿರಲಿಲ್ಲ ಎಂದು ಹೇಳದರು.

ಕಬ್ಬನ್​ ಪಾರ್ಕ್​ನಲ್ಲಿ ನಮ್ಮ ಬೆಂಗಳೂರು ಹಬ್ಬ

ಕಂದಾಯ ಸಚಿವ ಆರ್​ ಆಶೋಕ್​ ಮಾತನಾಡಿ, ಹೊರ ಭಾಗಗಳಿಂದ ಬೆಂಗಳೂರಿಗೆ ಬಂದು ನೆಲೆಸಿರುವವರಿಗೆ ಕನ್ನಡ ನಾಡಿನ ಕಲೆ, ಸಂಸ್ಕೃತಿಯ ಕುರಿತು ಅರಿವು ಮೂಡಿಸುವುದಕ್ಕಾಗಿ ಬೆಂಗಳೂರು ಹಬ್ಬವನ್ನು ಆಯೋಜಿಸಲಾಗಿದೆ. ನಾನು 2010 ರಲ್ಲಿಯೇ ಬೆಂಗಳೂರು ಹಬ್ಬ ಆಚರಿಸಲು ಪ್ರಯತ್ನ ಮಾಡಿದ್ದೆ. ಕಾರಣಾಂತರಗಳಿಂದ ಅದು ಸಾಧ್ಯವಾಗಲೇ ಇಲ್ಲ. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಹಕಾರದಿಂದ ಇದು ಸಾಧ್ಯವಾಯಿತು ಎಂದರು.

ಕಬ್ಬನ್​ ಪಾರ್ಕ್​ನಲ್ಲಿ ನಮ್ಮ ಬೆಂಗಳೂರು ಹಬ್ಬ

ಕೆಂಪೇಗೌಡರು ದೊಡ್ಡ ಕನಸನ್ನು ಇಟ್ಟುಕೊಂಡು ಬೆಂಗಳೂರು ಕಟ್ಟಿದರು. ತಿಗಳರಪೇಟೆ, ಅಕ್ಕಿ ಪೇಟೆ, ಸುಲ್ತಾನ್ ಪೇಟೆ, ಬಳೆ ಪೇಟೆ ಹೀಗೆ ಸುಮಾರು 64 ಪೇಟೆಗಳನ್ನು ಕಟ್ಟುವ ಮೂಲಕ ಸರ್ವರ ಅಭ್ಯುದಯಕ್ಕೆ ಮುನ್ನುಡಿ ಬರೆದಿದ್ದರು. ಎಲ್ಲ ಜಾತಿ, ಧರ್ಮದವರಿಗೂ ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಟ್ಟಿದ್ದರು. ಪ್ರಸ್ತುತ ಬೆಂಗಳೂರು ನಗರ ವಿಶ್ವವಿಖ್ಯಾತ ನಗರವಾಗಿ ಬೆಳೆದಿದೆ. ಇಡೀ ಪ್ರಪಂಚದಲ್ಲಿ ಬೆಂಗಳೂರು ಎಲ್ಲರಿಗೂ ಚಿರಪರಿಚಿತ ನಗರ. ದೇಶದ‌ ಎಲ್ಲ ಭಾಗದ ಜನ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದಾರೆ. ಬೇರೆ ಬೇರೆ ದೇಶದ ಜನರು ಸಹ ಇಲ್ಲಿ ನೆಲೆಸಿದ್ದು, ಅವರಿಗೆ ನಮ್ಮ ಕಲೆ, ಆಹಾರ ಸಂಸ್ಕೃತಿ, ಸಂಸ್ಕಾರ ಗೊತ್ತಾಗಬೇಕು ಎಂದು ಹೇಳಿದರು.

ಕೆಂಪೇಗೌಡರು ಸುಮಾರು 64 ಪೇಟೆಗಳನ್ನು ಕಟ್ಟುವುದರ ಮೂಲಕ ಬೆಂಗಳೂರು ನಗರವನ್ನು ನಿರ್ಮಿಸಿದ್ದಾರೆ. ಬೆಂಗಳೂರಿನ ಭಾಷೆ, ತಿಂಡಿ, ಕಲೆ, ಸಂಸ್ಕೃತಿ ಎಲ್ಲವನ್ನು ಕಲಿಸುವ ಊರೇ ಬೆಂಗಳೂರು. ನಾವು ಬೆಂಗಳೂರನ್ನು ಇನ್ನಷ್ಟು ವಿಶ್ವ ವಿಖ್ಯಾತಿ ಮಾಡಬೇಕಾಗಿದೆ. ಅಲ್ಲದೆ, ಪ್ರಸ್ತುತ ಪ್ರಾರಂಭವಾಗಿರುವ ಬೆಂಗಳೂರು ಹಬ್ಬ ಮುಂದಿನ ದಿನಗಳಲ್ಲಿ ಈ ಹಬ್ಬ ಜಗದ್ವಿಖ್ಯಾತ ಆಗಬೇಕು ಎನ್ನುವುದು ನನ್ನ ಆಶಯ. ಇನ್ನು ಮುಂದೆ ಪ್ರತಿ ವರ್ಷ ಸಂಕ್ರಾಂತಿಯ ಸಂದರ್ಭದಲ್ಲಿ ಬೆಂಗಳೂರು ಹಬ್ಬ ನಡೆಯಲಿದೆ ಎಂದು ಹೇಳಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವ ನಾಗೇಶ್​, ಕಬ್ಬನ್​ ಉದ್ಯಾನದ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ್​, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಕಬ್ಬನ್​ ಪಾರ್ಕ್​ನಲ್ಲಿ ನಮ್ಮ ಬೆಂಗಳೂರು ಹಬ್ಬ

ಹಬ್ಬದಲ್ಲಿ ಜನ ಸಾಗರ:ವಾರಾಂತ್ಯವಾಗಿದ್ದ ಶನಿವಾರ ಬೆಂಗಳೂರು ನಗರದ ಸುತ್ತಮುತ್ತಲ ಭಾಗಗಳಿಂದ ಸಾವಿರಾರು ಜನ ಆಗಮಿಸಿದ್ದು, ಬೆಂಗಳೂರು ಹಬ್ಬವನ್ನು ವೀಕ್ಷಣೆ ಮಾಡಿದರು. ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು ಸೇರಿದಂತೆ ವಿವಿಧ ಭಾಗಗಳ ಜನ ಆಗಮಿಸಿ ಹಬ್ಬದಲ್ಲಿ ಭಾವಚಿತ್ರಗಳನ್ನು ತೆಗೆದುಕೊಳ್ಳುವಲ್ಲಿ ಮಗ್ನರಾಗಿದ್ದರು. ನಮ್ಮ ಬೆಂಗಳೂರು ಹಬ್ಬದ ಪ್ರಯುಕ್ತ ಬಾಲಭವನ ಆವರಣದ ಆ್ಯಂಪಿಕ್ ಥಿಯೇಟರ್‌ನಲ್ಲಿ ವಿವಿಧ ಅಕಾಡೆಮಿಗಳು, ರಂಗಶಂಕರ ಮತ್ತು ನೀನಾಸಂ ಸಂಸ್ಥೆಗಳ ಸಹಯೋಗದಲ್ಲಿ ನಾಟಕ, ಬೀದಿ ನಾಟಕಗಳು, ಗೊಂಬೆ ಪ್ರದರ್ಶನ ನಡೆಯಿತು.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಕಲಾವಿದರು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದರು. ಕಲಾವಿದರು, ಚಲನಚಿತ್ರಗಳು ಮತ್ತು ಆಹಾರದ ಮೂಲಕ ಬೆಂಗಳೂರು ನಗರದ ಭವ್ಯತೆ ಮತ್ತು ಸಂಸ್ಕೃತಿಯನ್ನು ಪ್ರಸ್ತುತಪಡಿಸಿದರು.

ಇದನ್ನೂ ಓದಿ:ಮಾರ್ಚ್ 25, 26ರಂದು ನಮ್ಮ ಬೆಂಗಳೂರು ಹಬ್ಬ: ಕಲೆ, ಸಿನಿಮಾ, ಆಹಾರ ಮೇಳ ಆಯೋಜನೆ

ABOUT THE AUTHOR

...view details