ಬೆಂಗಳೂರು: ವಾಹನಗಳ ನಕಲಿ ಆರ್. ಸಿ ಕಾರ್ಡ್ ಮತ್ತು ನಕಲಿ ಇನ್ಸೂರೆನ್ಸ್ ತಯಾರಿಸುತ್ತಿದ್ದ ಆರೋಪಿಗಳ ಬಂಧನ ಮಾಡುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶ್ರೀಧರ್, ಸಂತೋಷ್ ಬಂಧಿತ ಆರೋಪಿಗಳು. ಈ ಆರೋಪಿಗಳು ನಗರದ ಆರ್.ಟಿ ಓ ಕಚೇರಿಯ ಡಿ. ಆರ್. ಸಿ ಸ್ಮಾರ್ಟ್ ಕಾರ್ಡ್ಗಳನ್ನ ಕಳ್ಳತನ ಮಾಡಿ ಸ್ಮಾರ್ಟ್ ಕಾರ್ಡ್ಗಳಲ್ಲಿ ಮೊದಲು ಪ್ರಿಂಟ್ ಆಗಿದ್ದ ಮಾಲೀಕರ ಹೆಸರನ್ನ ಅಳಿಸಿಹಾಕಿ ನಂತರ ಅದನ್ನು ರೀ ಪ್ರಿಂಟ್ ಮಾಡಿ ದ್ವಿಚಕ್ರವಾಹನಗಳಿಗೆ ಮತ್ತು ಕಾರುಗಳಿಗೆ 3 ಸಾವಿರ ರೂ. ಗಳಿಗೆ ನಕಲಿ ಆರ್ ಸಿ ಕಾರ್ಡ್ ಮಾರಾಟ ಮಾಡುತ್ತಿದ್ದರು.
ಈ ಮಾಹಿತಿ ಸಿಸಿಬಿ ಹೆಚ್ಚುವರಿ ಆಯುಕ್ತರಾದ ಸಂದೀಪ್ ಪಾಟೀಲ್ ಅವರಿಗೆ ತಿಳಿದು ಸಿಸಿಬಿ ಡಿಸಿಪಿ ಕುಲ್ ದೀಪ್ ಕುಮಾರ್ ಅವರ ತಂಡ ರಚನೆ ಮಾಡಿ ಆರೋಪಿಗಳು ಇರುವ ಮನೆಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಅವರು ಸುಮಾರು 135 ಕಾರ್ ಮತ್ತು ದ್ವಿಚಕ್ರ ವಾಹನಗಳಿಗೆ ನಕಲಿ ಆರ್ ಸಿ ಕಾರ್ಡ್ ಮಾಡಿ ಮೂರು ಸಾವಿರದಿಂದ ನಾಲ್ಕು ಸಾವಿರಕ್ಕೆ ಮಾರಾಟ ಮಾಡಿದ್ದಾಗಿ ತಿಳಿಸಿದ್ದಾರೆ.
ಹಾಗೆಯೇ 500 ಕಾರು ಮತ್ತು ದ್ವಿಚಕ್ರವಾಹನಗಳಿಗೆ ನಕಲಿ ಇನ್ಸೂರೆನ್ಸ್ ಮಾಡಿಕೊಟ್ಟಿರುವ ವಿಚಾರವನ್ನೂ ಕೂಡ ಬಾಯ್ಬಿಟ್ಟಿದ್ದಾರೆ. ಸದ್ಯ ಆರೋಪಿಗಳನ್ನ ಸಿಸಿಬಿ ಅಧಿಕಾರಿಗಳು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.