ಬೆಂಗಳೂರು :ಮೆನಿಂಗೊಮೈಲೋಸೆಲ್ ಎಂಬ ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದ 1 ವರ್ಷದ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಯ ವೈದ್ಯರು ಮಗುವಿಗೆ ಮರುಜನ್ಮ ನೀಡಿದ್ದಾರೆ.
ಬೆಂಗಳೂರಿನ ಸತೀಶ್ ಮತ್ತು ಸುಷ್ಮಾ (ಹೆಸರು ಬದಲಿಸಲಾಗಿದೆ) ದಂಪತಿ ಮದುವೆಯಾಗಿ 4 ವರ್ಷಗಳ ಬಳಿಕ ಮೊದಲ ಬಾರಿಗೆ ಮಗು ಬರುವ ನಿರೀಕ್ಷೆಯಲ್ಲಿದ್ದರು. ಸುಷ್ಮಾ ಗರ್ಭಿಣಿಯಾಗಿ 5 ತಿಂಗಳಲ್ಲಿ ತಪಾಸಣೆಗೆ ಒಳಗಾದಾಗ ಗರ್ಭದಲ್ಲಿರುವ ಮಗುವಿಗೆ ಮೆನಿಂಗೊಮೈಲೋಸೆಲ್ ಎಂಬ ಜನ್ಮದೋಷವಿದೆ ಎಂದು ತಿಳಿದ ಪೋಷಕರು ಆಘಾತಕ್ಕೊಳಗಾದರು. ಈ ಸಂಬಂಧ ಅನೇಕ ವೈದ್ಯರನ್ನು ಸಂದರ್ಶಿಸಿದ ಬಳಿಕ ಅವರ ಸೂಚನೆಯಂತೆ ದಂಪತಿ ಶಸ್ತ್ರಚಿಕಿತ್ಸಕರನ್ನು ಭೇಟಿ ಮಾಡಲು ನಿರ್ಧರಿಸಿದರು.
ತಮ್ಮ ಕೊನೆಯ ಭರವಸೆಯೆಂಬಂತೆ ದಂಪತಿ ಸಮಾಲೋಚನೆಗಾಗಿ ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ಡಾ.ರವಿ ಗೋಪಾಲ್ ವರ್ಮಾರನ್ನು ಭೇಟಿ ಮಾಡಿದರು. ವೈದ್ಯರು ಅವರಿಗೆ ಜನ್ಮ ದೋಷವನ್ನು ಗುಣಪಡಿಸಬಹುದೆಂಬ ಭರವಸೆ ನೀಡಿದರು.
ಇದನ್ನೇ ಸವಾಲಾಗಿ ಸ್ವೀಕರಿಸಿದ ಆಸ್ಟರ್ ಸಿಎಂಐ ಆಸ್ಪತ್ರೆಯ ಡಾ.ರವಿ ಗೋಪಾಲ್ ವರ್ಮಾ, ಡಾ.ನಿರ್ಮಲಾ ಎಸ್ ಮತ್ತು ಡಾ.ಮಧುಸೂದನ್ ಜಿ ನೇತೃತ್ವದ ನರಶಸ್ತ್ರಚಿಕಿತ್ಸಕರ ತಂಡ, ನಾಲ್ಕು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಬೆನ್ನುಮೂಳೆಯಲ್ಲಿದ್ದ ಅಂತರವನ್ನು ಮುಚ್ಚಿ ಮಗುವನ್ನು ಬದುಕುಳಿಸಿದ್ದಾರೆ.
ಏನಿದು ಮೆನಿಂಗೊಮೈಲೋಸೆಲ್ :ಮೆನಿಂಗೊಮೈಲೋಸೆಲ್ ಒಂದು ವಿಧದ ಸ್ಪಿನಾಬಿಫಿಡಾ. ಇದು ಜನ್ಮಜಾತ ದೋಷವಾಗಿದ್ದು, ಮಗು ಜನಿಸುವ ಮುನ್ನ ಬೆನ್ನುಹುರಿಯ ನಾಳ ಮತ್ತು ಬೆನ್ನೆಲುಬು ಮುಚ್ಚಿರುವುದಿಲ್ಲ. ನಮ್ಮ ದೇಶದಲ್ಲಿ ವಾರ್ಷಿಕವಾಗಿ ಪ್ರತಿ ಸಾವಿರ ಜನನಗಳಿಗೆ 1.9 ಇಂಪ್ಯಾಕ್ಟ್ ಇದೆ. ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಕೆಲವು ಪರೀಕ್ಷೆಗಳ ಮೂಲಕ ಈ ಸಮಸ್ಯೆಯನ್ನು ಕಂಡು ಹಿಡಿಯಲಾಗುತ್ತದೆ.
ಇದಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದು, ಬೆನ್ನಿನಲ್ಲಿ ತೆರೆದುಕೊಂಡಿರುವ ನಾಳವನ್ನು ಮುಚ್ಚುತ್ತಾರೆ. ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಹಲವು ಗಂಭೀರ ಪರಿಸ್ಥಿತಿಗೆ ಕಾರಣವಾಗುತ್ತದೆ ಎನ್ನಲಾಗುತ್ತದೆ. ಈ ಕುರಿತು ಆಸ್ಟರ್ ಸಿಎಂಐ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ಮುಖ್ಯಸ್ಥ ಡಾ. ರವಿ ಗೋಪಾಲ್ ವರ್ಮಾ ಮಾಹಿತಿ ನೀಡಿದ್ದು, ಪ್ರತಿವರ್ಷ ನಾವು ಮೆನಿಂಗೊಮೈಲೋಸೆಲ್ ನಂತಹ ನರದ ನಾಳದ ದೋಷದಿಂದ ಬಳಲುತ್ತಿರುವ ಅನೇಕ ನವಜಾತ ಶಿಶುಗಳನ್ನು ಕಾಣುತ್ತಿದ್ದೇವೆ.
ಸಾಮಾನ್ಯವಾಗಿ ಈ ನ್ಯೂನತೆಗಳನ್ನು ಗರ್ಭಧಾರಣೆಯ 5ನೇ ತಿಂಗಳಿನ ಮೊದಲೇ ಗುರುತಿಸಲಾಗುತ್ತದೆ. ಮಗುವಿನ ಜೀವನ ಗುಣಮಟ್ಟದ ಮೇಲೆ ಪರಿಣಾಮ ಬೀರದಂತೆ ಸಂಪೂರ್ಣವಾಗಿ ಚಿಕಿತ್ಸೆ ನೀಡಬಹುದಾಗಿದೆ. ಆದರೂ ಅನೇಕ ಪೋಷಕರಿಗೆ ಈ ಸ್ಥಿತಿಯ ಕುರಿತಾದ ಸಂಭವನೀಯ ಚಿಕಿತ್ಸೆಗಳ ಬಗ್ಗೆ ಅರಿವಿಲ್ಲದಿರುವುದರಿಂದ ಅವರು ಮಗುವನ್ನು ತೆಗೆದು ಹಾಕುವ ಆಯ್ಕೆ ಮಾಡುತ್ತಾರೆ.
ಈ ಅರಿವಿನ ಕೊರತೆ ಕುಟುಂಬ ಮತ್ತು ಪೋಷಕರ ಮೇಲೆ ಮಾನಸಿಕ ಪರಿಣಾಮ ಬೀರುವುದಲ್ಲದೆ ಮಕ್ಕಳ ಮರಣ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುವುದರಿಂದ ಒಟ್ಟಾರೆಯಾಗಿ ಜನಸಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆ. ಮೆನಿಂಗೊಮೈಲೋಸೆಲ್ ತೆಳುವಾದ ಗಾಳಿ ತುಂಬಿದ ಬಲೂನಿನಂತೆ ಇರುವುದರಿಂದ ಹೆರಿಗೆಯ ಸಮಯದಲ್ಲಿ ಇದು ಛಿದ್ರವಾಗದಂತೆ ನೋಡಿಕೊಳ್ಳುವುದು ಈ ಸ್ಥಿತಿಗೆ ಚಿಕಿತ್ಸೆ ನೀಡುವ ಏಕೈಕ ಸವಾಲು ಎಂದರು.