ಬೆಂಗಳೂರು: ಕೋವಿಡ್ ಎರಡನೇ ಅಲೆ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ನಗರದಲ್ಲಿ ಕೋವಿಡ್ನಿಂದ ಸತ್ತವರ ಸಂಖ್ಯೆ ಸೋಮವಾರ ಶೂನ್ಯಕ್ಕೆ ಇಳಿದಿದೆ. ಆದರೆ, ನಿನ್ನೆ ಮತ್ತೆ 11 ಕ್ಕೆ ಏರಿಕೆಯಾಗಿತ್ತು. ಆದರೆ ಆಗಸ್ಟ್ ತಿಂಗಳು ಪೂರ್ತಿ 10 ಕ್ಕಿಂತ ಕಡಿಮೆ ಸಂಖ್ಯೆಯಲ್ಲೇ ಕೋವಿಡ್ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಮರಣದ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಸದ್ಯ ಕೋವಿಡ್ ಮರಣ ಪ್ರಮಾಣ ನಗರದಲ್ಲಿ 0.91ರಷ್ಟಿದೆ.
ಏಪ್ರಿಲ್ ಆರಂಭದಲ್ಲಿ ಕೋವಿಡ್ನಿಂದ ಸತ್ತವರ ಪ್ರಮಾಣ ಶೇ.0.37 ಗೆ ಇಳಿಕೆಯಾಗಿತ್ತು. ನಂತರ ಜೂನ್ ತಿಂಗಳಲ್ಲಿ ಶೇ.7.41 ಗೆ ಏರಿಕೆಯಾಗಿತ್ತು. ಸ್ಮಶಾನಗಳ ಮುಂದೆ ಶವಗಳ ಕ್ಯೂ ಎಲ್ಲರ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಸೋಮವಾರ ಕೋವಿಡ್ ಸಾವು ಸೊನ್ನೆಯಾಗಿದ್ದು, ನಗರವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ. ಈವರೆಗೆ ಕೊರೊನಾದಿಂದ 15,971 ಮಂದಿ ಮೃತಪಟ್ಟಿದ್ದಾರೆ. 2020 ಜೂನ್ 5 ಮತ್ತು 2021 ಜನವರಿ 10 ರಂದು ಕೋವಿಡ್ನಿಂದ ಒಂದೂ ಸಾವು ಸಂಭವಿಸಿರಲಿಲ್ಲ.
ನಗರದಲ್ಲಿ ಕೋವಿಡ್ ಮರಣ ಸಂಖ್ಯೆ ಅತಿ ಕಡಿಮೆ:
ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಡಿ.ರಂದೀಪ್ ಮಾತನಾಡಿ, ನಗರದಲ್ಲಿ ಕೋವಿಡ್ ಮರಣ ಸಂಖ್ಯೆ ಅತಿ ಕಡಿಮೆ ಆಗಿದೆ. ನಗರದಲ್ಲಿ ಸಾಕಷ್ಟು ಆಸ್ಪತ್ರೆ ಬೆಡ್ಗಳೂ ಲಭ್ಯ ಇವೆ. ಅಲ್ಲದೇ ಕೋವಿಡ್ ಕೇಸ್ ಪತ್ತೆ ಆದ ಕೂಡಲೇ ರೋಗಿಯ ಮನೆಗೆ ವೈದ್ಯರ ತಂಡ ಹೋಗಿ ಫಿಜಿಕಲ್ ಟ್ರಯಾಜ್ ಮಾಡಿ, ಆರೋಗ್ಯ ಪರಿಸ್ಥಿತಿ ಪರಿಶೀಲಿಸಲಾಗ್ತಿದೆ. ಹೀಗಾಗಿ ಸೋಂಕಿತರ ಆರೋಗ್ಯ ಹದಗೆಡುವ ಮೊದಲೇ ಚಿಕಿತ್ಸೆ ನೀಡುತ್ತಿರುವುದರಿಂದ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗುವುದರಿಂದ ಬೇಗ ಗುಣಮುಖರಾಗುತ್ತಿದ್ದಾರೆ ಎಂದು ಹೇಳಿದರು.
ದೆಹಲಿಯ ಬಳಿಕ ಬೆಂಗಳೂರಿನಲ್ಲೆ ಅತಿಹೆಚ್ಚು ಲಸಿಕೆ:
ಐಸಿಯು ಸೇರ್ಪಡೆ ಕೂಡಾ ಬಹಳಷ್ಟು ಕಡಿಮೆ ಇದೆ. ಇದಲ್ಲದೇ ಕಂಟೇನ್ಮೆಂಟ್ ಝೋನ್ಗಳು, ಮಾಸ್ಕ್ ಕಡ್ಡಾಯ ನಿಯಮ ಕಟ್ಟುನಿಟ್ಟಾಗಿ ಮುಂದುವರಿಸಲಾಗುವುದು. ಲಸಿಕೆ ವಿತರಣೆ ಕೂಡಾ ದಿನದಿಂದ ದಿನಕ್ಕೆ ಹೆಚ್ಚಳ ಆಗುತ್ತಿದ್ದು, ದೆಹಲಿಯ ಬಳಿಕ ಬೆಂಗಳೂರಿನಲ್ಲೆ ಅತಿಹೆಚ್ಚು ಲಸಿಕೆ ನೀಡಲಾಗುತ್ತಿದ್ದು, ನಿನ್ನೆ ಒಂದೇ ದಿನ 1 ಲಕ್ಷ ಡೋಸ್ ಲಸಿಕೆ ರಾಜ್ಯ ಸರ್ಕಾರ ಪೂರೈಕೆ ಮಾಡಿದೆ. ಮುಂದಿನ ಎರಡು ದಿನದಲ್ಲಿ ಈ ಲಸಿಕೆ ಬಳಕೆ ಮಾಡಲಾಗುವುದು ಎಂದರು.
ಒಂದು ಲಕ್ಷ ಮನೆಗಳನ್ನು ತಲುಪಿದ ಮನೆ ಮನೆ ಸರ್ವೆ:
ಮನೆ ಬಾಗಿಲಿಗೆ ಕಾರ್ಪೊರೇಷನ್ ವೈದ್ಯರು ಎಂಬ ಹೆಲ್ತ್ ಸರ್ವೆ ಆರಂಭವಾಗಿದ್ದು, ಈಗಾಗಲೇ ಒಂದು ಲಕ್ಷ ಮನೆಗಳನ್ನು ತಲುಪಿ ಮನೆಮಂದಿಯ ಆರೋಗ್ಯ ಪರಿಸ್ಥಿತಿಯನ್ನು ದಾಖಲಿಸಲಾಗಿದೆ. 54 ವಾರ್ಡ್ಗಳಲ್ಲಿ 7 ತಂಡಗಳು ಪ್ರಾಯೋಗಿಕವಾಗಿ ಕೆಲಸ ಮಾಡುತ್ತಿದೆ. ಡಿಜಿಟಲ್ ಟೂಲ್ ಮೂಲಕ ಆರೋಗ್ಯ ಪರಿಸ್ಥಿತಿಯ ಸಮೀಕ್ಷೆ ವರದಿಯಾಗುತ್ತಿದ್ದು, ಏನಾದರೂ ಸಮಸ್ಯೆ ಆದ ಕೂಡಲೇ ಪಾಲಿಕೆ ತಂಡ ಜನರ ಮನೆಬಾಗಿಲಿಗೆ ತಲುಪಲಿದೆ ಎಂದರು.