ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ನಗರದ ವಾಹನ ಸಂಚಾರ ದಟ್ಟಣೆ ನಿವಾರಣೆಗೆ ತಕ್ಷಣ ಮತ್ತು ದೀರ್ಘಕಾಲಿಕ ಪರಿಹಾರ ಕೈಗೊಳ್ಳುವ ಉದ್ದೇಶದಿಂದ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇದೇ ಮೊದಲ ಬಾರಿಗೆ ವಿವಿಧ ಇಲಾಖೆಗಳ ಮುಖ್ಯಸ್ಥರೊಂದಿಗೆ ನಿನ್ನೆ ತಡರಾತ್ರಿವರೆಗೆ ಸಿಟಿ ರೌಂಡ್ಸ್ ಹೊಡೆದು ಟ್ರಾಫಿಕ್ ಸಮಸ್ಯೆ ಕುರಿತು ಪರಿಶೀಲನೆ ನಡೆಸಿದರು.
ಮಂಗಳವಾರ ರಾತ್ರಿ 10.30ರ ಸುಮಾರಿಗೆ ಬಿಬಿಎಂಪಿ ಕೇಂದ್ರ ಕಚೇರಿಯಿಂದ ನಗರ ಪ್ರದಕ್ಷಿಣೆ ಆರಂಭಗೊಂಡಿತು. ಬಿಬಿಎಂಪಿ ವಾಹನ ಮತ್ತು ಬಿಎಂಟಿಸಿ ವಜ್ರ ಬಸ್‌ನಲ್ಲಿ ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್‌ಸಿಂಗ್, ಬಿಡಿಎ ಆಯುಕ್ತ ರಾಜೇಶ್‌ಗೌಡ, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳು ನಗರ ಪ್ರದಕ್ಷಿಣೆಗೆ ತೆರಳಿದರು.
ವಿವಿಧ ಇಲಾಖೆಗಳ ಮುಖ್ಯಸ್ಥರನ್ನೊಳಗೊಂಡ ತಂಡವು ಮೊದಲಿಗೆ ಗೊರಗುಂಟೆಪಾಳ್ಯ ಜಂಕ್ಷನ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ತುಷಾರ್ ಗಿರಿನಾಥ್, ಅಲ್ಪಾವಧಿ ಯೋಜನೆಯಲ್ಲಿ ರಸ್ತೆ ಪುನಶ್ಚೇತನ ಕಾರ್ಯಕೈಗೊಳ್ಳಲು ರಸ್ತೆಯನ್ನು ಮಿಲ್ಲಿಂಗ್ ಮಾಡಿ ರಾತ್ರಿ 11ರ ನಂತರ ಗುಣಮಟ್ಟ ಕಾಪಾಡಿಕೊಂಡು ಕೆಲಸ ಮಾಡಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿರುವ ಮೇಲುಸೇತುವೆ ಮೂಲಕ ಬಸ್‌ಗಳು ಹೋಗಲು ಆಗುತ್ತದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.