ಬೆಂಗಳೂರು: ಬಹುತೇಕ ಸದಾ ಬಿಡುವಿರದೇ ಕರ್ತವ್ಯ ನಿರ್ವಹಿಸುವ ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿಗಳು ಹಾಗೂ ಅಪರಾಧ ವರದಿಗಾರರಿಗಾಗಿ "ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಪ್ 2023" ಕ್ರಿಕೆಟ್ ಟೂರ್ನಮೆಂಟ್‌ನ್ನು ಆಯೋಜಿಸಲಾಗಿತ್ತು. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿಗಳ ಮತ್ತು ಬೆಂಗಳೂರು ನಗರ ಕ್ರೈಂ ನ್ಯೂಸ್ ವರದಿಗಾರರ ಜ್ಯೂನಿಯರ್ಸ್ ತಂಡ ಮುಖಾಮುಖಿ ಆಗಿತ್ತು. ಇದರಲ್ಲಿ ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿಗಳ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಪ್ ಫೈನಲ್ ವೀಕ್ಷಣೆಗೆ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಆಗಮಿಸಿದ್ದರು. ವಿಜೇತ ತಂಡಕ್ಕೆ ಟ್ರೋಫಿ ವಿತರಿಸಿ ಶುಭ ಕೋರಿದರು. ದಿನನಿತ್ಯ ಬಿಡುವಿಲ್ಲದೆ ಕರ್ತವ್ಯದಲ್ಲಿ ತೊಡಗಿರುವ ಇಲಾಖೆಯ ಸಿಬ್ಬಂದಿಗಳು ಹಾಗೂ ಮಾಧ್ಯಮಮಿತ್ರರಿಗಾಗಿ ಕ್ರಿಕೆಟ್ ಪಂದ್ಯ ಆಯೋಜಿಸಿರುವ ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಸ್ಟೇಡಿಯಂನ ಗ್ರೌಂಡ್ಸ್ ಮೆನ್ ಹಾಗೂ ಆಟದ ತೀರ್ಪುಗಾರರಿಗೆ 20 ಸಾವಿರ ರೂ. ಪ್ರೋತ್ಸಾಹಧನವನ್ನ ಇದೇ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತರು ವಿತರಿಸಿದರು.