ಬೆಂಗಳೂರು:ಲಾಕ್ಡೌನ್ ಸಡಿಲಿಕೆಯಾದ ನಂತರ ಆರೋಪಿಗಳ ಬಂಧನ, ಕಂಟೈನ್ಮೆಂಟ್ ಝೋನ್ನಲ್ಲಿ ಕೆಲಸ ಹಾಗೂ ಬೀಟ್ನಲ್ಲಿರುವಾಗ ನಗರದಲ್ಲಿ ಸುಮಾರು13 ಪೊಲೀಸರಿಗೆ ಸೋಂಕು ತಗುಲಿದೆ ಎಂದು, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಿಕಿತ್ಸೆಗೊಳಗಾದ ಮೂವರು ಪೊಲೀಸ್ ಸಿಬ್ಬಂದಿ ಡಿಸ್ಚಾರ್ಜ್ ಆಗಿದ್ದು, ಒಬ್ಬರು ಮೃತಪಟ್ಟಿದ್ದಾರೆ ಎಂದರು.
ಲಾಕ್ಡೌನ್ ಸಡಿಲಿಕೆಯ ಬಳಿಕ ಬೆಂಗಳೂರಿನಲ್ಲಿ ಜನದಟ್ಟಣೆ ಜಾಸ್ತಿಯಾಗಿದ್ದು, ಸದ್ಯ ಅಂತರ್ ರಾಜ್ಯದಿಂದ ಬರುವುದಕ್ಕೆ ಅವಕಾಶವಿದೆ. ಹೀಗಾಗಿ ಎಲ್ಲೆಡೆ ಸಂಚಾರವೂ ಹೆಚ್ಚಾಗಿದೆ. ಮೊದಲು ಕೊರೊನಾ ಬಂದ ಎರಡೂವರೆ ತಿಂಗಳು ಯಾವುದೇ ಸೋಂಕು ಪೊಲೀಸರಲ್ಲಿ ಇರಲಿಲ್ಲ ಎಂದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸುದ್ದಿಗೋಷ್ಠಿ ಸೋಂಕು ಪತ್ತೆಯಾದ ಠಾಣೆಗಳು ಈಗಾಗಲೇ ಸೀಲ್ಡೌನ್ ಆಗಿವೆ. ಹಾಗೆ ನಗರದಲ್ಲಿ 13 ಪೊಲೀಸರ ಜೊತೆ ಸಂಪರ್ಕವಿದ್ದ 420 ಜನ ಸಿಬ್ಬಂದಿ ಕ್ವಾರಂಟೈನ್ನಲ್ಲಿ ಇದ್ದಾರೆ. ಕೊರೊನಾ ಇರುವ ಕಾರಣ ಪೊಲೀಸರು ಎಚ್ಚರಿಕೆ ತೆಗೆದುಕೊಳ್ಳುವುದು ಬಹಳ ಮುಖ್ಯ. ಹೀಗಾಗಿ ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ಬಳಕೆ ಕಡ್ಡಾಯವಾಗಿದೆ. ಇದರ ಬಗ್ಗೆ ಆಯಾ ಠಾಣೆ ಇನ್ಸ್‌ಪೆಕ್ಟರ್ ಜವಾಬ್ದಾರಿ ಹೊತ್ತು ಪ್ರತಿ, ಸಿಬ್ಬಂದಿಯನ್ನು ಮನೆಯವರಂತೆ ನೋಡಿಕೊಳ್ಳಬೇಕು ಎಂದರು.
ಇನ್ನು ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸಿದ್ದ, ವಿ.ವಿ.ಪುರಂ ಸಂಚಾರಿ ಠಾಣೆಯ ಎಎಸ್ಐ ಸಾವನ್ನಪ್ಪಿದ್ದು, ಈ ಮೊದಲು ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರಿಗೆ ರಜೆ ನೀಡಲಾಗಿತ್ತು. ಅವರ ಸಾವಿನಿಂದ ತುಂಬಾ ಬೇಜಾರಾಗಿದ್ದು, ಇದಕ್ಕೆ ನಾವು ಹೆದರಬಾರದು, ತುಂಬ ಧೈರ್ಯದಿಂದ ಎದುರಿಸಬೇಕು ಎಂದರು.