ಬೆಂಗಳೂರು: ಸಮಾಜ ವಿರೋಧಿ ಚಟುವಟಿಕೆ ಆರೋಪ ಮೇರೆಗೆ ಪಿಎಫ್ಐ ನಾಯಕರ ಹಾಗೂ ಕಚೇರಿಗಳ ಮೇಲೆ ಎನ್ಐಎ ದಾಳಿಸಿ ಎಂಟು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಮತ್ತೊಂದೆಡೆ ಸದ್ದಿಲ್ಲದೆ ನಗರ ಪೊಲೀಸರು ರಾಜ್ಯದೆಲ್ಲೆಡೆ 17 ಕಡೆಗಳಲ್ಲಿ ದಾಳಿ ನಡೆಸಿ ಬೆಂಗಳೂರಿನಲ್ಲಿ ಇಬ್ಬರು ಸೇರಿ 15 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಹಿಂದೆ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪಿಎಫ್ಐ ಸಂಘಟನೆಯು ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಕೊಂಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಇದೇ ಆಧಾರದ ಮೇರೆಗೆ ಕಾರ್ಯಾಚರಣೆ ಕೈಗೊಂಡ ಪೂರ್ವ ವಿಭಾಗ ಹಾಗೂ ಸಿಸಿಬಿಯು ಮನ್ಸೂರ್ ಹಾಗೂ ಯಾಸೀನ್ ಎಂಬುವರನ್ನು ವಶಕ್ಕೆ ಪಡೆದುಕೊಂಡಿದೆ. ಮೈಸೂರು, ಮಂಗಳೂರು, ಶಿವಮೊಗ್ಗ ಹಾಗೂ ಕಲಬುರಗಿ ಸೇರಿದಂತೆ 15 ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ವಶಕ್ಕೆ ಪಡೆದುಕೊಂಡ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 120 B ಒಳಸಂಚು, 121 -ರಾಷ್ಟ್ರದ ವಿರುದ್ದ ಸಮರ, 121 a ರಾಷ್ಟ್ರದ ವಿರುದ್ದ ಸಮರ ಸಾರಲು ಒಳಸಂಚು ಹಾಗೂ 153 a, ಕೋಮುಗಳ ನಡುವೆ ದ್ವೇಷ ಉಂಟುಮಾಡುವ ಸೆಕ್ಷನ್‌ನಡಿ ಪ್ರಕರಣ ದಾಖಲಾಗಿದೆ. ಕೆ.ಜಿ.ಹಳ್ಳಿ ಠಾಣೆಯಲ್ಲಿ ಪಿಎಫ್ಐ ವಿರುದ್ದ ಪ್ರಕರಣ ಸಂಬಂಧ 19 ಜನ ಅರೋಪಿಗಳ ಪಟ್ಟಿ ಮಾಡಲಾಗಿತ್ತು. ಆರೋಪಿಗಳೆಲ್ಲರೂ ಸಮಾಜದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ.