ಬೆಂಗಳೂರು: ಸಿಲಿಕಾನ್ ಸಿಟಿಯನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದ ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆ ಪ್ರಕರಣ ಸಂಬಂಧಿಸಿದಂತೆ ಸದ್ಯ ಮಾಜಿ ಮೇಯರ್ ಸಂಪತ್ ರಾಜ್ಗೆ ಸಿಸಿಬಿ ಮೂರನೇ ಬಾರಿ ನೋಟಿಸ್ ನೀಡಿದೆ.
ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ ಸಂಪತ್ ರಾಜ್ ಪತ್ತೆಗಾಗಿ ಸಿಸಿಬಿ ಮೂರು ವಿಶೇಷ ತಂಡ ರಚಿಸಿದ್ದು, ಕೇರಳ ಹಾಗೂ ಬೆಂಗಳೂರಿನಲ್ಲಿ ತಲಾಷ್ ನಡೆಸಿದೆ. ಮತ್ತೊಂದೆಡೆ ಇಂದು ಸಂಪತ್ ರಾಜ್ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಲಿದೆ. ಒಂದು ವೇಳೆ ಅರ್ಜಿ ತಿರಸ್ಕೃತಗೊಂಡ್ರೆ ಸಂಪತ್ ರಾಜ್ಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.
ತನಿಖೆಯ ದೃಷ್ಟಿಯಿಂದ ಸಂಪತ್ ವಿಚಾರಣೆ ಬಹಳ ಅಗತ್ಯವಿದೆ. ಸಿಸಿಬಿ ಪೊಲೀಸರ ಕಣ್ತಪ್ಪಿಸಿ ಖಾಸಗಿ ಆಸ್ಪತ್ರೆಯಿಂದ ಎಸ್ಕೇಪ್ ಆದ ಕಾರಣ ಸದ್ಯ ಸಂಪತ್ ರಾಜ್ ಬಂಧನ ಮಾಡಲೇಬೇಕೆಂದು ಸಿಸಿಬಿ ಮುಂದಾಗಿದೆ. ಈಗಾಗಲೇ ಸಂಪತ್ ರಾಜ್ ಸ್ನೇಹಿತರ ಮನೆ ಮತ್ತು ಆತ್ಮೀಯರ ಜತೆ ಸಂಪರ್ಕದ ಬಗ್ಗೆ ಸಿಸಿಬಿ ಮಾಹಿತಿ ಕಲೆಹಾಕಿದೆ. ಅಷ್ಟು ಮಾತ್ರವಲ್ಲದೆ ಪುಲಕೇಶಿನಗರದಲ್ಲಿರುವ ಮಾಜಿ ಮೇಯರ್ಗೆ ಸೇರಿದ ಎರಡು ಮನೆ ಮತ್ತು ಸಂಪತ್ ಅಕ್ಕನ ಮನೆಗೆ ಸಹ ಸಿಸಿಬಿ ನೋಟಿಸ್ ಅಂಟಿಸಿದೆ. ಇದಕ್ಕೂ ಮುನ್ನ ಎರಡು ಬಾರಿ ಸಿಸಿಬಿ ನೋಟಿಸ್ ನೀಡಿದೆ. ಇದು 3ನೇ ನೋಟಿಸ್ ಆಗಿದ್ದು, ನೋಟಿಸ್ ಸಿಕ್ಕ ತಕ್ಷಣ ವಿಚಾರಣೆಗೆ ಹಾಜರಾಗಬೇಕಾಗಿ ತಿಳಿಸಲಾಗಿದೆ. ಒಂದು ವೇಳೆ ಬಾರದೆ ಹೋದರೆ ಕಾನೂನು ಮುಖಾಂತರ ಕ್ರಮ ಜರುಗಿಸುವುದಾಗಿ ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಕೈವಾಡ ಪ್ರಮುಖವಾಗಿದೆ. ಬಂಧನದ ಭಯದಿಂದ ಸಂಪತ್ ರಾಜ್ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆಗೆ ದಾಖಲಾಗಿದ್ರು. ಆದರೆ ಸದ್ಯ ಸಿಸಿಬಿ ಪೊಲೀಸರ ಕಣ್ತಪ್ಪಿಸಿ ಸಂಪತ್ ರಾಜ್ ಎಸ್ಕೇಪ್ ಆಗಿದ್ದು, ಸಹಾಯ ಮಾಡಿದ ಖಾಸಗಿ ಆಸ್ಪತ್ರೆಯವರ ವಿಚಾರಣೆ ಕೂಡ ನಡೀತಿದೆ.