ಬೆಂಗಳೂರು :ರಾಜ್ಯ ಬಿಜೆಪಿ ಸರ್ಕಾರವೇನೋ, ಕಾಂಗ್ರೆಸ್ ಸರ್ಕಾರ ಆರಂಭಿಸಿದ್ದ ವೈಟ್ ಟ್ಯಾಪಿಂಗ್, ಟೆಂಡರ್ ಶ್ಯೂರ್ ರಸ್ತೆಗಳನ್ನು ತನಿಖೆಗೊಪ್ಪಿಸಿದೆ. ಇದರಿಂದ ಅರ್ಧಕ್ಕೆ ನಿಲ್ಲಿಸಿರುವ ವೈಟ್ ಟ್ಯಾಪಿಂಗ್ ರಸ್ತೆಗಳು ಸಂಚಾರ ದಟ್ಟಣೆಗೆ ಕಾರಣವಾಗಿವೆ. ಇದನ್ನು ಸ್ಥಳೀಯ ಶಾಸಕರನ್ನು ಪ್ರಶ್ನಿಸಿದರೆ, ಇದಕ್ಕೆಲ್ಲ ಸರ್ಕಾರವೇ ಕಾರಣ ಎಂದು ದೂಷಿಸುತ್ತಾರೆ.
ಆದರೆ, ರಾಜಕೀಯ ತಿಕ್ಕಾಟಗಳಿಗೆ ಸಾರ್ವಜನಿಕರು ಉತ್ತಮ ರಸ್ತೆಯಿಲ್ಲದೆ ಪರದಾಡುವಂತಾಗಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣ ಸಂಪರ್ಕಿಸುವ ಧನ್ವಂತರಿ ರಸ್ತೆ, ಗಾಂಧಿನಗರದ ಅಣ್ಣಮ್ಮ ಟೆಂಪಲ್ ರಸ್ತೆ, ಕಾಟನ್ ಪೇಟೆ ರಸ್ತೆಗಳು ದುರಸ್ತಿಗೊಂಡು ವರ್ಷಗಳೇ ಕಳೆಯುತ್ತಿವೆ.ಆದರೆ, ಕಾಮಗಾರಿಯೂ ಮುಗಿಯುತ್ತಿಲ್ಲ, ಹಳೇ ರಸ್ತೆಯನ್ನೂ ಅಗೆಯಲಾಗಿದೆ. ಇದರಿಂದ ಆಟೋ ಚಾಲಕರು ಬಿಬಿಎಂಪಿ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.
ಸಿಲಿಕಾನ್ ಸಿಟಿ ಮುಖ್ಯರಸ್ತೆಗಳಿಗಿಲ್ಲ ಅಭಿವೃದ್ಧಿ ಭಾಗ್ಯ.. ಇನ್ನು, ಈ ವಿಚಾರವಾಗಿ ಶಾಸಕ ದಿನೇಶ್ ಗುಂಡೂರಾವ್ ಅವರನ್ನು ಕೇಳಿದ್ರೆ, ತನಿಖೆಗೆ ಒಪ್ಪಿಸಿರುವುದರಿಂದ ಗುತ್ತಿಗೆದಾರರರು ಭಯಪಟ್ಟು ಕಾಮಗಾರಿ ನಡೆಸಲು ಮುಂದೆ ಬರುತ್ತಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ.
ಮೆಜೆಸ್ಟಿಕ್, ಗಾಂಧಿನಗರದ ಮುಖ್ಯರಸ್ತೆಗಳೇ ಹಾಳಾಗಿವೆ. ರಸ್ತೆಗಳಲ್ಲಿ ಹೋದರೆ ಟ್ರಾಫಿಕ್ ಜಾಮ್ ಸಮಸ್ಯೆ ಆಗುತ್ತೆ. 25 ರೂ. ಬಾಡಿಗೆಗೆ ಎರಡೆರಡು ಗಂಟೆ ಟ್ರಾಫಿಕ್ ಜಾಮ್‌ನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ. ಕಾಟನ್‌ಪೇಟೆ ರಸ್ತೆಯಂತೂ ಮುಚ್ಚಿ ಒಂದೂವರೇ ವರ್ಷ ಆಯ್ತು ಎಂದು ಆಟೋ ಚಾಲಕ ರಾಮು ಅಸಮಾಧಾನ ಹೊರಹಾಕಿದರು.
ಗಾಂಧಿನಗರ ಕ್ಷೇತ್ರದ ಶಾಸಕ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನ ಕೇಳಿದ್ರೆ, ಕೆಲಸ ನಡೀತಾ ಇದೆ, ನಿಂತಿಲ್ಲ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ಅಲ್ಲದೆ ಹೊಸ ಸರ್ಕಾರ ಬಂದಮೇಲೆ ವೈಟ್ ಟ್ಯಾಪಿಂಗ್, ಟೆಂಡರ್ ಶ್ಯೂರ್ ಬಗ್ಗೆ ಅಪನಂಬಿಕೆ ಇದೆ. ಆದರೆ, ಸಿಎಂ ಹಾಗೂ ಅಧಿಕಾರಿಗಳಿಗೆ ನಾನೇ ಅಮಂತ್ರಿಸುತ್ತೇನೆ. ನಮ್ಮ ಕ್ಷೇತ್ರಕ್ಕೆ ಖುದ್ದಾಗಿ ಭೇಟಿ ನೀಡಿ ನೋಡಲಿ. ವೈಟ್ ಟ್ಯಾಪಿಂಗ್ ಅಂದರೆ ಭ್ರಷ್ಟಾಚಾರ ಎಂದು ತಪ್ಪಾಗಿ ಬಿಂಬಿಸಿರುವುದು ಸರಿಯಲ್ಲ. ಕಾಟನ್‌ಪೇಟೆ ಮುಖ್ಯರಸ್ತೆಯೂ ಎರಡು ತಿಂಗಳಲ್ಲಿ ಕಾಮಗಾರಿ ಸಂಪೂರ್ಣವಾಗಲಿದೆ ಎಂದರು.