ಕರ್ನಾಟಕ

karnataka

ETV Bharat / state

ಪೈಲಟ್​ ಆಗಬೇಕೆಂದಿದ್ದವಳ ಬಾಳಲ್ಲಿ ವಿಧಿಯಾಟ.. ಬಾಲಕಿಯ ಕನಸು ನುಚ್ಚು ನೂರು ಮಾಡಿತು ಕಸದ ಲಾರಿ

ಘಟನೆ ಬಗ್ಗೆ ಮಾತನಾಡಿದ ಮೃತ ಬಾಲಕಿಯ ತಾಯಿ ಗೀತಾ, 'ಬೆಳಗ್ಗೆ ಸ್ಕೂಲ್​​ಗೆ ತಲೆ ಬಾಚಿ ಕಳಿಸಿದ್ದೆ ಸಾರ್.. ಅದೇ ಮುಖ ಕಣ್ಮುಂದೆ ಐತೆ ಸಾರ್... ಓದೋದ್ರಲ್ಲಿ ತುಂಬಾ ಆಸೆ ಇಟ್ಕೊಂಡಿದ್ದಳು... ಪೈಲಟ್ ಆಗಬೇಕು ಅಂತಾ ಕನಸು ಕಂಡಿದ್ಳು.. ಎಂದು ಮಗಳನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ.

By

Published : Mar 21, 2022, 8:45 PM IST

ಬಿಬಿಎಂಪಿ ಕಸದ ಲಾರಿ ಹರಿದು ಬಾಲಕಿ ಸಾವು
ಬಿಬಿಎಂಪಿ ಕಸದ ಲಾರಿ ಹರಿದು ಬಾಲಕಿ ಸಾವು

ಬೆಂಗಳೂರು: ಆಕೆ ಬೆಟ್ಟದಂತಹ ಕನಸು‌ ಕಟ್ಟಿಕೊಂಡಿದ್ದಳು. ಚೆನ್ನಾಗಿ ಓದಿ ಪೈಲಟ್ ಆಗಬೇಕೆಂದು ಗುರಿ ಇಟ್ಟುಕೊಂಡಿದ್ದಳು. ಪೋಷಕರು ಸಹ ಮಗಳ ಆಸೆಗೆ ನೀರೆರೆಯುತ್ತಿದ್ರು‌. ‌ಆದರೆ, ಕ್ರೂರ ವಿಧಿ ಇವರ ಬಾಳಲ್ಲಿ ಆಟವಾಡಿದೆ‌.‌ ಮೊಗ್ಗಿನಂತೆ ಅರಳಬೇಕಿದ್ದ ಮಗಳು ಇನ್ನಿಲ್ಲವಾಗಿದ್ದಾಳೆ‌.

ಹೌದು, ಖಾಸಗಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 13 ವರ್ಷದ ಅಕ್ಷಯಾ ಇಹಲೋಕ ತ್ಯಜಿಸಿದ್ದಾಳೆ. ಇಂದು ಮಧ್ಯಾಹ್ನ ಹೆಬ್ಬಾಳ ಪೊಲೀಸ್ ಠಾಣೆಯ ಮುಂಭಾಗದ ಅಂಡರ್ ಪಾಸ್​ನಲ್ಲಿ ಮಳೆ ನೀರು ತುಂಬಿದ್ದರಿಂದ ಬಳಕೆ ಯೋಗ್ಯವಾಗಿರಲಿಲ್ಲ. ಬಿಬಿಎಂಪಿ ಗಮನಕ್ಕೂ‌ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಪಾದಚಾರಿಗಳು ಮುಖ್ಯರಸ್ತೆ ಮೂಲಕ ರೋಡ್ ಕ್ರಾಸ್ ಮಾಡಬೇಕಾಗಿತ್ತು. ಮತ್ತಿಕೆರೆಯಲ್ಲಿ ವಾಸವಾಗಿದ್ದ ಅಕ್ಷಯಾ ಸಹ ರಸ್ತೆ ದಾಟುತ್ತಿದ್ದಾಗ ಬಿಬಿಎಂಪಿ‌ ಕಸದ ಲಾರಿಯು ಯಮನ ರೂಪದಲ್ಲಿ ಆಕೆ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಅಲ್ಲಿಗೆ ಆಕೆ ಕಟ್ಟಿಕೊಂಡಿದ್ದ ಕನಸು ನುಚ್ಚು ನೂರಾಗಿದೆ.

ಹೆಚ್ಚಿನ ಓದಿಗೆ:ಬಿಬಿಎಂಪಿ ಕಸದ ಲಾರಿ ಹರಿದು ಬಾಲಕಿ ಸಾವು.. 6ಕ್ಕೂ ಅಧಿಕ ಮಂದಿಗೆ ಗಾಯ

ನೂರಾರು ಕನಸುಗಳನ್ನ ಕಂಡಿದ್ದ ಬಾಲಕಿ: ಪೈಲಟ್ ಆಗಬೇಕೆಂದು ಪ್ರತಿದಿನ ಇಷ್ಟಪಟ್ಟು ಓದ್ತಿದ್ದ ಬಾಲಕಿ ಅಕ್ಷಯಾ, 10ನೇ ತರಗತಿ ಪುಸ್ತಕ ತರ್ತೀನಿ ಎಂದು ಅಮ್ಮನ ಬಳಿ ಹೇಳಿ ಹೊರಬಂದಿದ್ದಳಂತೆ.

ಘಟನೆ ಬಗ್ಗೆ ಮಾತನಾಡಿದ ಮೃತ ಬಾಲಕಿಯ ತಾಯಿ ಗೀತಾ, 'ಬೆಳಗ್ಗೆ ಸ್ಕೂಲ್​​ಗೆ ತಲೆ ಬಾಚಿ ಕಳಿಸಿದ್ದೆ ಸಾರ್.. ಅದೇ ಮುಖ ಕಣ್ಮುಂದೆ ಐತೆ ಸಾರ್... ಓದೋದ್ರಲ್ಲಿ ತುಂಬಾ ಆಸೆ ಇಟ್ಕೊಂಡಿದ್ದಳು... ಪೈಲಟ್ ಆಗಬೇಕು ಅಂತಾ ಕನಸು ಕಂಡಿದ್ಳು.. ಎಂದು ಮಗಳನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದರು.

₹2 ಲಕ್ಷ ಪರಿಹಾರ ನೀಡಿದ ಶಾಸಕ:ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಶಾಸಕ ಬೈರತಿ ಸುರೇಶ್ ಮಾತನಾಡಿ,‌ ವಿಷಾದಕರ ಘಟನೆ ನಡೆದಿದೆ. ರಸ್ತೆ ದಾಟುವಾಗ ಅಪಘಾತವಾಗಿ ಬಾಲಕಿ ಸಾವನ್ನಪ್ಪಿದ್ದಾಳೆ. ಯಾರ ನಿರ್ಲಕ್ಷ್ಯ ಆಗಿದೆಯೋ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತೆ. ಬಾಲಕಿ ಜೀವ ಮತ್ತೆ ವಾಪಸ್ ತರೋಕಾಗಲ್ಲ. ನನ್ನ ಸ್ವಂತ ಹಣದಿಂದ ಬಾಲಕಿಯ ತಂದೆಗೆ ₹2 ಲಕ್ಷದ ಚೆಕ್ ಕೊಡ್ತಿದ್ದೀನಿ. ಸರ್ಕಾರ, ಬಿಬಿಎಂಪಿಗೂ ಪರಿಹಾರ ಹಣ ಕೊಡಲು ಮನವಿ ಮಾಡಿದ್ದೇನೆ. ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಯನ್ನ ಅಮಾನತು ಮಾಡಲಾಗುತ್ತೆ, ಅಮಾನತು ಬಗ್ಗೆ ಬಿಬಿಎಂಪಿ ಕಮಿಷನರ್ ಹೇಳಿದ್ದಾರೆ ಎಂದು‌ ಶಾಸಕರು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details