ಬೆಂಗಳೂರು: ಖಾಸಗಿ ಬಸ್ ಮಾಲೀಕರು ಹಾಗೂ ಚಾಲಕರಿಗೆ ಶಕ್ತಿ ಯೋಜನೆ ವಿಸ್ತರಣೆ, ಬೈಕ್ ಟ್ಯಾಕ್ಸಿ ನಿಷೇಧ ಸೇರಿ ವಿವಿಧ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಆಶ್ರಯದಲ್ಲಿ 37 ಸಂಘಟನೆಗಳು ನೀಡಿದ್ದ ಬೆಂಗಳೂರು ಬಂದ್ ಬೆನ್ನಲ್ಲೇ ಸಾರಿಗೆ ಸಚಿವರು ಮಹತ್ವದ ಹೇಳಿಕೆ ನೀಡಿದ್ದಾರೆ.
ಈ ಸಂಬಂಧ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಭಟನಾಕಾರರ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ಇಂದು 37 ಸಂಘಟನೆಗಳು ಪ್ರತಿಭಟನೆ ಮಾಡುತ್ತಿವೆ. ನಾನು ಕೂಡ ನಿಮ್ಮ ಪರವಾಗಿಯೇ ಇದ್ದೇನೆ. ಶಕ್ತಿಯೋಜನೆ ಮತ್ತು ತೆರಿಗೆ ಹೆಚ್ಚಳ ನಮ್ಮ ಸರ್ಕಾರ ಅವಧಿಯಲ್ಲಿ ಆಗಿವೆ. ಉಳಿದೆಲ್ಲ ಬೇಡಿಕೆಗಳು ಹಿಂದಿನ ಸರ್ಕಾರದ ಅವಧಿಯಲ್ಲಿ ಆಗಿವೆ. ಆದರೂ ಬಹುತೇಕ ಎಲ್ಲಾ ಬೇಡಿಕೆ ಈಡೇರಿಸುತ್ತೇನೆ ಎಂದು ಹೇಳಿದ್ದೇನೆ. ಚಾಲಕರ ಅಭಿವೃದ್ಧಿ ನಿಗಮ ಸ್ಥಾಪನೆ ಬಗ್ಗೆ ಸಿಎಂ ಜತೆ ಚರ್ಚೆ ಮಾಡಿದ್ದೇನೆ. ನಿಗಮ ಮಂಡಳಿಯನ್ನ ಖಚಿತವಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸಲು ಕ್ರಮ ಕೈಗೊಂಡಿದ್ದೇವೆ. ಆಟೋಗಳಿಗೆ ರಹದಾರಿ ನಿರ್ಮಾಣ ವಿಚಾರ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಓಲಾ-ಊಬರ್ ಬಗ್ಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ನಾಲ್ಕು ಪ್ರಕರಣ ದಾಖಲಾಗಿವೆ. ಹಿರಿಯ ವಕೀಲರರೊಂದಿಗೆ ಮಾತನಾಡಿ ಆದಷ್ಟು ಬೇಗ ಅದನ್ನು ಕ್ಲಿಯರ್ ಮಾಡುವ ಪ್ರಯತ್ನ ಮಾಡುತ್ತೇವೆ. ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ 17 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಕಳೆದ ಬಿಜೆಪಿ ಸರ್ಕಾರದಲ್ಲಿ ಕೇವಲ ₹ 4 ಕೋಟಿಯಿತ್ತು. ಈ ಬಾರಿ ₹ 17 ಕೋಟಿ ಮೀಸಲಿಟ್ಟಿದ್ದೇವೆ. ಅದಷ್ಟು ಬೇಗ ಚಾಲಕರ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಶಿಕ್ಷಣ ಇಲಾಖೆಯೊಂದಿಗೆ ಚರ್ಚೆ ನಡೆಸುತ್ತೇನೆ. ಚಾಲಕರಿಗೆ ವಸತಿ ಯೋಜನೆ ವಿಚಾರ ಸಂಬಂಧ ಸಚಿವ ಜಮೀರ್ ಅಹ್ಮದ್ ಅವರ ಬಳಿ ಮಾತಾಡಿದ್ದೇನೆ. ಚಾಲಕರಿಗೆ ವಸತಿಗೆ ಸಂಬಂಧಿಸಿದಂತೆ ಪ್ರತ್ಯೇಕ ಕೋಟಾ ನೀಡಲು ಮನವಿ ಮಾಡುತ್ತೇವೆ. ಬೈಕ್ ಟ್ಯಾಕ್ಸಿ ಬಗ್ಗೆ ನಾಲ್ಕು ಕೇಸ್ಗಳಿದ್ದು, ತಡೆಯಾಜ್ಞೆ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು.
ಬೆಳಗ್ಗೆಯಿಂದ ಏನೆಲ್ಲಾ ಸಮಸ್ಯೆ ಆಯ್ತು.. ಇದಕ್ಕೂ ಮುನ್ನ ಬೆಂಗಳೂರು ಬಂದ್ಗೆ ಚಾಲಕರ ಒಕ್ಕೂಟ, ಆಟೋ ಚಾಲಕರ ಸಂಘಟನೆಗಳು, ಬಸ್ ಮಾಲೀಕರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಬಂದ್ಗೆ ಕರೆ ನೀಡಿದ್ದರಿಂದ ಬಸ್, ಕ್ಯಾಬ್ ಹಾಗೂ ಆಟೋಗಳು ರಸ್ತೆಗಿಳಿಯಲಿಲ್ಲ. ಇದರಿಂದ ರಾಜ್ಯ ಹಾಗೂ ವಿವಿಧ ಜಿಲ್ಲೆಗಳಿಂದ ಬಂದಿದ್ದ ಪ್ರಯಾಣಿಕರಿಗೆ ತೊಂದರೆಯಾಯಿತು. ಈ ಸಮಸ್ಯೆ ಹೋಗಲಾಡಿಸಲು ಬಿಎಂಟಿಸಿ ತನ್ನ ಸೇವೆಯಲ್ಲಿ ಹೆಚ್ಚುವರಿ ಬಸ್ಗಳು ಕಾರ್ಯಾಚರಣೆ ಕೈಗೊಂಡಿದ್ದರಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿತ್ತು. ಕ್ಯಾಬ್ ಚಾಲಕರ ಮುಷ್ಕರದಿಂದ ಕ್ರಿಕೆಟಿಗ ಅನಿಲ್ ಕುಂಬ್ಳೆಗೂ ಬಿಸಿ ತಟ್ಟಿತ್ತು. ಏರ್ ಪೋರ್ಟ್ನಲ್ಲಿ ವೊಲ್ವೊ ಬಸ್ ಹತ್ತಿ ಅವರು ಸಂಚರಿಸಿದರು.