ಬೆಂಗಳೂರು :ಸರ್ಕಾರಿ ಕೆಲಸ, ಅದರಲ್ಲೂ ಪೊಲೀಸ್ ಕೆಲಸ ಅಂದರೆ ಜೀವನ ಚೆನ್ನಾಗಿರುತ್ತೆ ಅಂದುಕೊಳ್ಳೋರೆ ಹೆಚ್ಚು. ಆದರೆ, ಇಲ್ಲೊಬ್ಬರು ಸಿಕ್ಕ ಪೊಲೀಸ್ ಕೆಲವನ್ನೇ ಬಿಟ್ಟು ಕೃಷಿ ಮಾಡಿ ಇದೀಗ ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಎಂಬ ಪ್ರಶಸ್ತಿಯನ್ನು ಪಡೆದಿದ್ದಾರೆ.
ಹಾಸನ ಜಿಲ್ಲೆ ಅರಕಲಗೂಡಿನ ಚಿಕ್ಕಬೊಮ್ಮನಹಳ್ಳಿ ಗ್ರಾಮದ ಸಿ ಎಂ ನವೀನ್‌ಕುಮಾರ್ ಕೃಷಿ ಲಾಭದಾಯಕ ಹುದ್ದೆಯಲ್ಲ ಎನ್ನುವವರಿಗೆ ಉತ್ತರ ನೀಡುವಂತೆ ಒಕ್ಕಲುತನ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಬಿಎ ಪದವೀಧರರಾದ ನವೀನ್ 2007ರಲ್ಲಿ ಸಿಕ್ಕ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆ ಬಿಟ್ಟು, ವ್ಯವಸಾಯ ಮಾಡಲು ಮುಂದಾಗಿದ್ದರು. ತಮ್ಮ 8 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಅಡಿಯಲ್ಲಿ ಹಲವು ಬಗೆಯ ತರಕಾರಿ, ಹಣ್ಣುಗಳನ್ನು ಬೆಳೆದು ವಾರ್ಷಿಕ ಲಕ್ಷಾಂತರ ರೂ. ಲಾಭಗಳಿಸಿದ್ದಾರೆ.
ಜತೆಗೆ ರೇಷ್ಮೆ, ಜೇನು ಸಾಕಣೆ, ಹೈನುಗಾರಿಕೆ, ನಾಟಿ ಕೋಳಿ, ಬಾತುಕೋಳಿ, ಮೊಲ, ಮೇಕೆ ಸಾಕಣೆಯಂತಹ ಕಸುಬನ್ನು ಮಾಡಿದ್ದಾರೆ. ಈ ಎಲ್ಲದರಿಂದ ಪೊಲೀಸ್ ಹುದ್ದೆಯಲ್ಲಿ ಸಿಗುವ ಆದಾಯಕ್ಕಿಂತ 10 ಪಟ್ಟು ಹೆಚ್ಚಿನ ಆದಾಯಗಳಿಸಿ ಮಾದರಿ ರೈತ ಎನಿಸಿಕೊಂಡಿದ್ದಾರೆ. ಸದ್ಯ ನವೀನ್ಗೆ ಕೃಷಿ ವಿಶ್ವವಿದ್ಯಾಲಯ ಕೃಷಿ ಮೇಳದಲ್ಲಿ ಹಾಸನ ಜಿಲ್ಲೆಯ ಅತ್ಯುತ್ತಮ ರೈತ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕೃಷಿ ಮೇಳದ ಮೂರನೇ ದಿನವೂ ಹಾಸನ, ಮಂಡ್ಯ ಮತ್ತು ಕೋಲಾರ ಜಿಲ್ಲೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅತ್ಯತ್ತಮ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜತೆಗೆ ಅತ್ಯುತ್ತಮ ವೈಜ್ಞಾನಿಕ ಲೇಖನಕ್ಕಾಗಿ ಜಿ ಎಂ ಸುಜಿತ್ ಅವರಿಗೆ ಡಾ. ಆರ್. ದ್ವಾರಕೀನಾಥ್ ಪ್ರಶಸ್ತಿ ಮತ್ತು ಜಿ. ಆರ್. ಅರುಣಾ ಅವರಿಗೆ ಪ್ರೊ. ಬಿ ವಿ ವೆಂಕಟರಾವ್ ಪ್ರಶಸ್ತಿ ನೀಡಲಾಯಿತು.