ಬೆಂಗಳೂರು: ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಎಂದೇ ಕರೆಸಿಕೊಂಡಿರುವ 'ಬೆಂಗಳೂರು 69' ಚಿತ್ರದ ಆಡಿಯೋವನ್ನು ನಟ ರಿಷಬ್ ಶೆಟ್ಟಿ ಬಿಡುಗಡೆಗೊಳಿಸಿದರು.
ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಹಮ್ಮಿಕೊಂಡಿದ್ದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಚಿನ್ನೇಗೌಡರು ಆಗಮಿಸಿ ಚಿತ್ರದ ಆಡಿಯೋ ಜತೆಗೆ ಟೀಸರ್ ಕೂಡಾ ರಿಲೀಸ್ ಮಾಡಿದ್ರು.
ಬೆಂಗಳೂರು 69 ಚಿತ್ರದ ಆಡಿಯೋ ಬಿಡುಗಡೆ ಚಿತ್ರದ ಮೇಕಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಿಷಬ್ ಶೆಟ್ಟಿ, ಕನ್ನಡದಲ್ಲಿ ಈಚೆಗಿನ ದಿನಗಳಲ್ಲಿ ಅತಿ ಹೆಚ್ಚು ಚಿತ್ರಗಳು ನಿರ್ಮಾಣವಾಗುತ್ತಿವೆ. ಗುಣಮಟ್ಟದ ಚಿತ್ರ ತಯಾರಿಸುವುದು ಸವಾಲಿನ ಕೆಲಸವಾಗಿದೆ. ಇದರಿಂದ ಪರಭಾಷೆ ಚಿತ್ರಗಳು ಹೆಚ್ಚು ಮಾನ್ಯತೆ ಪಡೆಯಬಹುದು ಎಂದು ಅಭಿಪ್ರಾಯಪಟ್ಟರು.
ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡರು ಚಿತ್ರದ ಹಾಡುಗಳ ಬಗ್ಗೆ ಸಂತಸ ವ್ಯಕ್ತಪಡಿದರು. ನಿರ್ಮಾಪಕರು ಸಿನಿಮಾ ಬಿಡುಗಡೆ ವೇಳೆ ಸ್ವಲ್ಪ ತಾಳ್ಮೆ ವಹಿಸಿ ಬಿಡುಗಡೆಗೊಳಿಸಬೇಕು ಎಂದು ಸಲಹೆ ನೀಡಿದರು.
ನಿರ್ದೇಶಕ ಕ್ರಾಂತಿ ಚೈತನ್ಯ ಅವರ ನಿರ್ದೇಶನದಲ್ಲಿ ಮೂಡಿ ಬಂದ ಬೆಂಗಳೂರು 69 ಚಿತ್ರದಲ್ಲಿ ಹುಡುಗಿ ಅಪಹರಣದ ಸುತ್ತ ಕತೆಯ ಎಳೆ ಬಿಚ್ಚಿಕೊಳ್ಳುತ್ತವೆ. ಪವನ್ ಶೆಟ್ಟಿ, ಜಯದೇವನ್ ಮೋಹನ್, ತೆಲುಗಿನ ಶೆಫಿ ಮುಂತಾದವರು ನಟಿಸಿದ್ದು, ವಿಕ್ರಂ ಚಂದನ ಸಂಗೀತ ಸಂಯೋಜಿಸಿದ್ದಾರೆ. ಗುಲ್ಜಾರ್ ಬೆಂಗಳೂರು69 ಚಿತ್ರಕ್ಕೆ ಬಂಡವಾಳ ಹೂಡಿದ್ದು ಡಿಸೆಂಬರ್ ಅಂತ್ಯಕ್ಕೆ ಚಿತ್ರವನ್ನು ರಿಲೀಸ್ ಮಾಡುವ ಆಲೋಚನೆಯಲ್ಲಿ ಚಿತ್ರತಂಡವಿದೆ.