ಬೆಂಗಳೂರು: ಯೋಗ ಅದ್ಭುತ ವಿದ್ಯೆ. ಈ ವಿದ್ಯೆಯನ್ನ ಕಲಿಯೋದು ಅಷ್ಟು ಸುಲಭ ಕೆಲಸವಲ್ಲ. ವಯಸ್ಸಿನಲ್ಲಿ ದೊಡ್ಡವರೂ ಕೂಡ ಯೋಗ ಕಲಿಯಲು ಸಮಯ ತೆಗೆದುಕೊಳ್ಳುತ್ತಾರೆ. ಆದ್ರೆ ಇಲ್ಲೊಬ್ಬ ಪುಟಾಣಿ ಅತಿ ಚಿಕ್ಕ ವಯಸ್ಸಿನಲ್ಲೇ ಅಂದರೆ ತನ್ನ 3 ವರ್ಷ ವಯಸ್ಸಿನಿಂದಲೇ ಯೋಗಾಸನ ಕಲಿತು, ಎಲ್ಲರ ಮೆಚ್ಚುಗೆ ಪಡೆದಿದ್ದಾಳೆ. ಅಷ್ಟೇ ಅಲ್ಲದೆ ಇದೀಗ ವಿಶ್ವದ ಪುಟಾಣಿ ಯೋಗ ಪಟು ಎಂಬ ಬಿರುದಿಗೆ ಪಾತ್ರವಾಗಿದ್ದಾಳೆ.
ವಿಶ್ವದ ಕಿರಿಯ ಯೋಗ ಪಟು ನಿಖಿತಾ ಹೌದು, ನಿಖಿತಾ ಎಂಬ 6 ವರ್ಷದ ಪುಟಾಣಿ ಕಳೆದ ಮೂರು ವರ್ಷಗಳಿಂದ ಯೋಗಾಸನ ಮಾಡುತ್ತಿದ್ದಾಳೆ. ಇವಳ ಗುರು ಈಕೆಯ ತಂದೆಯೇ ಆಗಿದ್ದಾರೆ. ಚಿಕ್ಕ ವಯಸ್ಸಿನಿಂದಲೇ ಯೋಗಾಸನ ಕಲಿತು ಇದೀಗ ಅದರಲ್ಲೇ ಪರಿಣತಳಾಗಿದ್ದಾಳೆ. ಸುಮಾರು 500ಕ್ಕೂ ಹೆಚ್ಚು ಆಸನಗಳನ್ನು ಕಲಿತ್ತಿದ್ದು, ನಿತ್ಯ ಚಾಚೂ ತಪ್ಪದೇ ಅಭ್ಯಾಸ ಮಾಡುತ್ತಾಳೆ. ಅದರಲ್ಲಿಯೂ ಡಾ.ರಾಜ್ ಮಾಡುತ್ತಿದ್ದ ಯೋಗಾಸನದ ನೌಲಿ ಎಂಬ ಆಸನವನ್ನು ಕೇವಲ ಮೂರು ತಿಂಗಳಲ್ಲೇ ಈ ಬಾಲೆ ಕಲಿತ್ತಿದ್ದಾಳೆ.
ಓದಿ:ಉಡುಪಿ: ಯೋಗ ಸಾಧಕಿ ತನುಶ್ರೀ ಪಿತ್ರೋಡಿ ಯೋಗಾಭ್ಯಾಸದ ವಿಡಿಯೋ ವೈರಲ್
ನಿಖಿತಾ ಹೇಳುವ ಹಾಗೆ ನಿತ್ಯ ಮುಂಜಾನೆ ಸುಮಾರು 3ಗಂಟೆಗೆ ಎದ್ದು ಒಂದು ಗಂಟೆ ಧ್ಯಾನ ಮಾಡಿ ಆನಂತರ ಸುಮಾರು 100 - 200 ಆಸನಗಳನ್ನು ಮಾಡುತ್ತಾಳೆ. ಒಟ್ಟಾರೆ ಸತತ 3 ತಾಸುಗಳ ಕಾಲ ಈಕೆ ಯೋಗಾಸನ ಅಭ್ಯಾಸ ಮಾಡುತ್ತಾಳೆ. ಈಗಾಗಲೇ ನಿಖಿತಾ ಹಲವಾರು ಪ್ರದರ್ಶನಗಳನ್ನ ನೀಡಿದ್ದಾಳೆ. ಹತ್ತು ಹಲವು ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದ್ದು, ಎಲ್ಲರ ಗಮನ ಸೆಳೆದಿದ್ದಾಳೆ. ಶಾಲೆಯಲ್ಲೂ ಕೂಡ ತನ್ನ ಸಹ ಪಾಠಿಗಳಿಗೆ ತಾನೆ ಯೋಗಾಸನ ಹೇಳಿ ಕೊಡುತ್ತಾಳೆ. ಪ್ರತಿ ಯೋಗಾಸನಕ್ಕೂ ಮಂತ್ರ ಪಟಿಸಿ ಯೋಗ ಮಾಡುತ್ತಾಳೆ.
ಯೋಗ ಮಾಡುವುದರಿಂದ ಮನಸ್ಸು ಮತ್ತು ದೇಹ ಶಾಂತವಾಗಿರುತ್ತದೆ. ಅಲ್ಲದೇ ದೊಡ್ಡವಳಾದ ಮೇಲೆ ಯೋಗಾಸನದಲ್ಲಿಯೇ ಸಾಧನೆ ಮಾಡುವ ಕನಸನ್ನು ಪುಟಾಣಿ ನಿಖಿತಾ ಹೊಂದಿದ್ದಾಳೆ. ಅಲ್ಲದೇ ಗಿನ್ನೆಸ್ ದಾಖಲೆ ಕೂಡಾ ಮಾಡುವ ಹಂಬಲ ಹೊಂದಿದ್ದು, ಆ ನಿಟ್ಟಿನಲ್ಲಿ ಸನ್ನದ್ಧಳಾಗುತ್ತಿದ್ದಾಳೆ.