ಕರ್ನಾಟಕ

karnataka

ETV Bharat / state

ವಿಶ್ವಕಪ್ ಕ್ರಿಕೆಟ್‌ ವೇಳೆ ಆನ್​ಲೈನ್ ಬೆಟ್ಟಿಂಗ್ ಜಾಹೀರಾತಿಗೆ ಕಡಿವಾಣ; ಆಫ್​ಲೈನ್ ದಂಧೆಯ ಮೇಲೆ ಪೊಲೀಸರ ಕಣ್ಣು

ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆನ್​ಲೈನ್ ಬೆಟ್ಟಿಂಗ್ ಜಾಹೀರಾತಿಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಿದೆ. ಆದ್ರೆ ಆಫ್‌ಲೈನ್ ಮೂಲಕ ನಡೆಯುವ ಬೆಟ್ಟಿಂಗ್ ದಂಧೆಯ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

cricket world cup betting
ವಿಶ್ವಕಪ್ ಪಂದ್ಯಗಳ ವೇಳೆ ಆನ್​ಲೈನ್ ಬೆಟ್ಟಿಂಗ್ ಜಾಹೀರಾತಿಗೆ ಕಡಿವಾಣ

By ETV Bharat Karnataka Team

Published : Oct 8, 2023, 10:43 AM IST

ಬೆಂಗಳೂರು: ಕ್ರೀಡೆಯಲ್ಲಿ ಸೋಲು - ಗೆಲುವಿನ ಮೇಲೆ ಬೆಟ್ಟಿಂಗ್‌ ಕಟ್ಟುವುದು ಇಂದು ನಿನ್ನೆಯ ಸಂಗತಿಯಲ್ಲ. ಇಂದಿಗೂ ಅನೇಕ ಕ್ರೀಡೆಗಳಲ್ಲಿ ಸೋಲು, ಗೆಲುವಿನ ಲೆಕ್ಕಾಚಾರ ಜೋರಾಗಿಯೇ ನಡೆಯುತ್ತಿದೆ. ಆದರೆ ಕಾಲಕ್ರಮೇಣ ಬೆಟ್ಟಿಂಗ್ ಎನ್ನುವುದು ದಂಧೆಯ ಸ್ವರೂಪ ಪಡೆದಿದ್ದು ಇಂದು ಅನೇಕ ದೇಶಗಳಲ್ಲಿ ಕಾನೂನಿನ ಮಾನ್ಯತೆಯನ್ನೂ ಪಡೆದುಕೊಂಡಿದೆ. ಆದರೂ ಆಫ್‌ಲೈನ್ ಮೂಲಕ ಬಾಜಿ ಕಟ್ಟುವವರ ಸಂಖ್ಯೆ ಕಡಿಮೆಯೇನಿಲ್ಲ.

ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ ಕ್ರಿಕೆಟ್‌ನಲ್ಲಿಯೂ ಬೆಟ್ಟಿಂಗ್‌ ದಂಧೆ ನಡೆಯುವ ಎಲ್ಲ ಸಾಧ್ಯತೆಗಳಿವೆ. ಇತ್ತೀಚಿಗೆ ನಡೆದ ಏಷ್ಯಾಕಪ್, ಕೆರಿಬಿಯನ್ ಪ್ರೀಮಿಯರ್‌ ಲೀಗ್‌‌ನಂಥ ಪಂದ್ಯಗಳ ವೇಳೆ ಬೆಟ್ಟಿಂಗ್​​ನಲ್ಲಿ ತೊಡಗಿದ್ದ ಅನೇಕ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಈ ಬಾರಿಯೂ ಸಹ ಬೆಟ್ಟಿಂಗ್‌ನಲ್ಲಿ ತೊಡಗುವವರ ಮೇಲೆ ಕಣ್ಣಿಡಲು ಪೊಲೀಸರು ಸಜ್ಜಾಗಿದ್ದಾರೆ.

ಇತರೆ ದಂಧೆಗಳಿಗಿಂತ ತುಸು ಭಿನ್ನವಾಗಿರುವ ಆಫ್‌ಲೈನ್ ಬೆಟ್ಟಿಂಗ್‌ ದಂಧೆಯನ್ನು ಪತ್ತೆ ಹಚ್ಚುವುದು ಸಹ ಪೊಲೀಸರಿಗೆ ಸವಾಲಿನ ಕೆಲಸ. ಸಾಮಾನ್ಯವಾಗಿ ಬೆಟ್ಟಿಂಗ್ ಎಂಬುದು ಬೇರೆ ಅಪರಾಧ ಚಟುವಟಿಕೆಗಳಂತೆ ನಡೆಯದೇ ಪರಿಚಿತರು, ಸ್ನೇಹಿತರು ಮುಖಾಂತರ ಭೇಟಿಯಾಗುವವರ ನಡುವೆ ನಡೆಯುವುದೇ ಹೆಚ್ಚು. ಆದ್ದರಿಂದ ಪ್ರಮುಖ ಕ್ರೀಡಾಕೂಟಗಳ ಸಂದರ್ಭದಲ್ಲಿ ಪಬ್, ಬಾರ್, ರೆಸ್ಟೋರೆಂಟ್, ಸೋಶಿಯಲ್ ಕ್ಲಬ್ ಮುಂತಾದ ಸ್ಥಳಗಳ ಮೇಲೆ ಪೊಲೀಸರು ಕಣ್ಣಿಟ್ಟಿರುತ್ತಾರೆ. ಅನೇಕ ಸಂದರ್ಭಗಳಲ್ಲಿ ಭಾತ್ಮೀದಾರರ ಮಾಹಿತಿಯ ಮೂಲಕ ದಂಧೆಕೋರರನ್ನು ಹೆಡೆಮುರಿ ಕಟ್ಟಲಾಗುತ್ತದೆ.

ಬೆಟ್ಟಿಂಗ್ ಎನ್ನುವುದು ಹಲವರು ಕಳೆದುಕೊಂಡು ಕೆಲವರು ಮಾತ್ರ ಗಳಿಸುವ ಒಂದು ದೊಡ್ಡ ಮೊತ್ತದ ಹಣದ ವ್ಯವಹಾರ. ಇದರಿಂದ ಅದೆಷ್ಟೋ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸಿದ ನಿದರ್ಶನಗಳಿವೆ. ಕೆಲವೊಮ್ಮೆ ದಂಧೆಯಿಂದಾಗಿ ಹಣ ತೀರಿಸಲಾಗದೆ ಅಥವಾ ಇನ್ನಿತರ ಕಾರಣಗಳಿಂದಾಗಿ ಅಪರಾಧ ಕೃತ್ಯಗಳಿಗೂ ಕಾರಣವಾಗಿದೆ. ಆದ್ದರಿಂದ ಬೆಟ್ಟಿಂಗ್​​ನಲ್ಲಿ ತೊಡಗದಂತೆ ಹಾಗೂ ಅದರ ಬಗ್ಗೆ ಗೊತ್ತಾದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಸಿಸಿಬಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಟ್ಟಿಂಗ್ ಪ್ರಚೋದಕ ಜಾಹೀರಾತಿಗೆ ಜಾಗವಿಲ್ಲ:ಪ್ರಮುಖ ಕ್ರೀಡಾಕೂಟಗಳ ಪ್ರಸಾರದ ಸಂದರ್ಭದಲ್ಲಿ ಬೆಟ್ಟಿಂಗ್ ಅಥವಾ ಇತರ ಯಾವುದೇ ಬಗೆಯ ಜೂಜಿನ ಜಾಹೀರಾತು ಅಥವಾ ಇನ್ಯಾವುದೇ ರೂಪದಲ್ಲಿ ತೋರಿಸಬಾರದು ಎಂದು ಏಷ್ಯಾಕಪ್ ಹಾಗೂ ವಿಶ್ವಕಪ್ ಆರಂಭಕ್ಕೂ ಮುನ್ನವೇ ಮಾಧ್ಯಮಗಳಿಗೆ ಕೇಂದ್ರ ಸೂಚಿಸಿತ್ತು. ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವಾಲಯದ ಪತ್ರಿಕಾ ಪ್ರಕಟಣೆಯಲ್ಲಿ ಮುದ್ರಣ, ಟಿವಿ ಮಾಧ್ಯಮಗಳಿಂದ ಹಿಡಿದು ಸೋಷಿಯಲ್ ಮೀಡಿಯಾ ಸಂಸ್ಥೆಗಳು, ಜಾಹೀರಾತು ಸಂಸ್ಥೆಗಳವರೆಗೆ ಎಲ್ಲಾ ಮಾಧ್ಯಮಗಳಿಗೂ ಈ ನಿಯಮ ಅನ್ವಯವಾಗಲಿದೆ. ಒಂದು ವೇಳೆ ನಿಯಮ ಪಾಲಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿತ್ತು.

ಬೆಟ್ಟಿಂಗ್ ಮೊದಲಾದ ಜೂಜುಗಳಿಗೆ ಜಾಹೀರಾತು ನೀಡಲು ಕಪ್ಪುಹಣ ಬಳಕೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಮಾಹಿತಿ ಮತ್ತು ಪ್ರಸರಣ ಸಚಿವಾಲಯ ತಿಳಿಸಿತ್ತು. ಗ್ಯಾಂಬ್ಲಿಂಗ್ ಆ್ಯಪ್​ಗಳ ಬಳಕೆದಾರರಿಂದ ಸಂಗ್ರಹಿಸಲಾದ ಹಣವನ್ನು ಏಜೆಂಟ್​ಗಳು ಭಾರತದ ಹೊರಗೆ ರವಾನಿಸುತ್ತಿರುವ ಘಟನೆಗಳು ಬೆಳಕಿಗೆ ಬಂದಿರುವ ವಿಚಾರವನ್ನು ಪ್ರಸ್ತಾಪಿಸಿತ್ತು. ದಂಧೆಯಿಂದ ಹಣದ ಅಕ್ರಮ ವರ್ಗಾವಣೆ ಆಗುತ್ತಿದೆ, ಗ್ಯಾಂಬ್ಲಿಂಗ್ ಆಟದಲ್ಲಿ ತೊಡಗುವ ಯುವಕರು ಮತ್ತು ಮಕ್ಕಳ ಹಣಕಾಸು ಮತ್ತು ಸಾಮಾಜಿಕ ಪರಿಸ್ಥಿತಿ ಹದಗೆಡುತ್ತದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವಾಲಯ ಎಚ್ಚರಿಸಿತ್ತು.

ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಸೇರಿದಂತೆ ಪ್ರಮುಖ ಕ್ರೀಡಾಕೂಟಗಳ ಸಂದರ್ಭಗಳಲ್ಲಿ ಬೆಟ್ಟಿಂಗ್ ಮತ್ತು ಗ್ಯಾಂಬ್ಲಿಂಗ್​ಗಳ ಜಾಹೀರಾತು ನೇರವಾಗಿ ಅಥವಾ ಪರೋಕ್ಷವಾಗಿ ಪ್ರಸಾರವಾಗುತ್ತಿದೆ. ಕ್ರಿಕೆಟ್​ನಂಥ ಪ್ರಮುಖ ಕ್ರೀಡೆಯಲ್ಲಿ ಈ ಬಗೆಯ ಬೆಟ್ಟಿಂಗ್ ಜಾಹೀರಾತು ಬಿತ್ತರವಾಗುವುದನ್ನ ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ, ಆನ್​ಲೈನ್ ಜಾಹೀರಾತು ಮಧ್ಯವರ್ತಿಗಳು ಭಾರತೀಯ ವೀಕ್ಷಕರಿಗೆ ಇಂಥ ಜಾಹೀರಾತುಗಳನ್ನು ತಲುಪಿಸಬಾರದು. ಯಾರಾದರೂ ಬೆಟ್ಟಿಂಗ್ ಜಾಹೀರಾತು ಪ್ರಸಾರ ಮಾಡಿದರೆ ಅದು 2019ರ ಗ್ರಾಹಕ ರಕ್ಷಣಾ ಕಾಯ್ದೆ, 1978ರ ಪ್ರೆಸ್ ಕೌನ್ಸಿಲ್ ಕಾಯ್ದೆ ಮೊದಲಾದ ಹಲವು ಕಾನೂನು ಕಟ್ಟಳೆಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಸ್ಪಷ್ಟಪಡಿಸಿತ್ತು.

ಇದನ್ನೂ ಓದಿ: ವಿಶ್ವಕಪ್​ನಲ್ಲಿ ಭಾರತ ತಂಡ ಮುನ್ನಡೆಸುತ್ತಿರೋದು ದೊಡ್ಡ ಗೌರವ: ನಾಯಕ ರೋಹಿತ್​ ಶರ್ಮಾ

ABOUT THE AUTHOR

...view details