ಬೆಂಗಳೂರು: ಇಂದಿನಿಂದ ಆ್ಯಪ್ ಆಧಾರಿತ ಆಟೋ ಸೇವೆ ಸ್ಥಗಿತಗೊಳಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದ್ದರೂ ಅಗ್ರಿಗೇಟರ್ಗಳು ಸೇವೆ ಮುಂದುವರೆಸಿದ್ದಾರೆ. ಹೀಗಾಗಿ ಸಾರಿಗೆ ಇಲಾಖೆ ನಿರ್ಣಾಯಕ ಕಾರ್ಯಾಚರಣೆಗಿಳಿದಿದೆ. ಸಾರಿಗೆ ಅಧಿಕಾರಿಗಳ ತಂಡವು ಸೈಬರ್ ಕ್ರೈಂ ತಂಡದ ನೆರವಿನೊಂದಿಗೆ ಅಖಾಡಕ್ಕಿಳಿದಿದ್ದು, ಕಠಿಣ ಕ್ರಮಕ್ಕೆ ಮುಂದಾಗಿದೆ.
ಇಂದಿನಿಂದ ರಾಜ್ಯದಲ್ಲಿ ಆ್ಯಪ್ ಆಧಾರಿತ ಆಟೋ ಸೇವೆ ನಿರ್ಬಂಧಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಪ್ರಾದೇಶಿಕ ಸಾರಿಗೆ ಇಲಾಖೆ ಆಯುಕ್ತರ ನೇತೃತ್ವದಲ್ಲಿ ಕಟ್ಟುನಿಟ್ಟಾಗಿ ಈ ಆದೇಶದ ಜಾರಿಗೆ ಇಲಾಖೆ ಮುಂದಾಗಿದೆ. ಬೆಳಗ್ಗೆಯಿಂದಲೇ ಸಾರಿಗೆ ಇಲಾಖೆ ಅಧಿಕಾರಿಗಳು ಅಖಾಡಕ್ಕಿಳಿದಿದ್ದು, ನಿಯಮ ಉಲ್ಲಂಘಿಸಿ ಆ್ಯಪ್ ಆಧಾರಿತ ಆಟೋ ಸೇವೆ ನೀಡುತ್ತಿರುವವರ ಹುಡುಕಾಟ ಆರಂಭಿಸಿದೆ.
ಅಧಿಕಾರಿಗಳು ಖುದ್ದಾಗಿ ತಮ್ಮ ಮೊಬೈಲ್ನಲ್ಲಿ ಆ್ಯಪ್ ಅಳವಡಿಸಿಕೊಂಡು ಆಟೋ ಸೇವೆ ನೀಡಲಾಗುತ್ತಿದೆಯೇ ಎಂದು ಪರಿಶೀಲನೆ ನಡೆಸುತ್ತಿದ್ದಾರೆ. ಕೆಲ ಅಗ್ರಿಗೇಟರ್ಗಳು ಇನ್ನೂ ಆಟೋ ಮತ್ತು ಬೈಕ್ ಸೇವೆ ಒದಗಿಸುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ನಿಯಮ ಉಲ್ಲಂಘಿಸುವ ಪ್ರತಿಯೊಂದು ಆಟೋ ಸೇವೆಗೆ ಕಂಪನಿಗೆ 5 ಸಾವಿರ ದಂಡ ವಿಧಿಸಲು ಸಾರಿಗೆ ಇಲಾಖೆ ನಿರ್ಧರಿಸಿದ್ದು, ಈ ಸಂಬಂಧ ನಿಯಮ ಉಲ್ಲಂಘನೆ ಬಗ್ಗೆ ದಾಖಲಾತಿ ಸಂಗ್ರಹಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ.