ನೆಲಮಂಗಲ : ಬೆಂಗಳೂರು ಸಹಕಾರಿ ಹಾಲು ಒಕ್ಕೂಟ (ಬಮೂಲ್) ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ, ಬೆಂಗಳೂರು ಉತ್ತರ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿ ಕೆ.ಎಸ್. ಕೇಶವಮೂರ್ತಿ ಜಯಗಳಿಸಿದ್ದಾರೆ.
'ಬಮೂಲ್' ಚುನಾವಣೆ... ಮೈತ್ರಿಗೆ ಒಲಿದ ಜಯ
ಬಮೂಲ್ ಬೆಂಗಳೂರು ಉತ್ತರ ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಕೇಶವಮೂರ್ತಿ ಅವರು ಗೆಲುವು ಸಾಧಿಸಿದ್ದಾರೆ.
ರಾಜ್ಯದ ಪ್ರತಿಷ್ಠಿತ ಕೆ.ಎಂ.ಎಫ್ ಸಂಸ್ಥೆಯ ಅಂಗ ಸಂಸ್ಥೆಗಳಾದ ಬೆಂಗಳೂರು ಹಾಲು ಒಕ್ಕೂಟದ (ಬಮೂಲ್) ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ, ಬೆಂಗಳೂರು ಉತ್ತರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬೆಂಬಲಿತ ಅಭ್ಯರ್ಥಿ ಕೇಶವಮೂರ್ತಿ 71 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ. ಇನ್ನೂ ಪ್ರತಿಸ್ಪರ್ಧಿ ಬಿಜೆಪಿಯ ಮುನಿರಾಜು 61 ಮತಗಳನ್ನ ಪಡೆದರೆ, ರೆಬೆಲ್ ಅಭ್ಯರ್ಥಿಯಾಗಿ ಕಣಕ್ಕೆ ಧುಮುಕಿದ್ದ ಬಿ.ಕೆ ಮಂಜುನಾಥ್ 31 ಮತಗಳನ್ನ ಪಡೆದು ಪರಾಭವಗೊಂಡಿದ್ದಾರೆ.
ಇನ್ನೂ ಕೆ.ಎಸ್ ಕೇಶವಮೂರ್ತಿಗೆ ಕಾಂಗ್ರೆಸ್ ನಾಯಕರಾದ ವೀರಪ್ಪ ಮೊಯ್ಲಿ, ಕೃಷ್ಣಭೈರೇಗೌಡ, ಶಾಸಕರಾದ ಮಂಜುನಾಥ್, ವೆಂಕಟರಮಣಯ್ಯ ಹಾಗೂ ಶ್ರೀನಿವಾಸಮೂರ್ತಿ ಬೆಂಬಲವಿದ್ದು ಬಮೂಲ್ ಅಧ್ಯಕ್ಷ ಸ್ಥಾನದ ರೇಸ್ ನಲ್ಲಿದ್ದಾರೆ. ನಾನು ರೈತರ ಪರ ಕೆಲಸ ಮಾಡಿದ್ದೇನೆ. ಮುಂದೆಯೂ ಜನಪರ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ, ನನಗೆ ಮತ ನೀಡಿದ ಮತದಾರರಿಗೆ ಧನ್ಯವಾದಗಳು ಎಂದು ಕೇಶವಮೂರ್ತಿ ಕೃತಜ್ಞತೆ ಸಲ್ಲಿಸಿದರು.