ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ನಾವು ಭಿಕ್ಷೆ ಬೇಡುತ್ತಿಲ್ಲ. ನಮಗೆ ಸಂವಿಧಾನ ಬದ್ಧವಾಗಿ ಬಂದಿದ್ದ 2ಎ ಪೂರ್ಣಪ್ರಮಾಣದ ಮೀಸಲಾತಿ ನೀಡಿ. ನಮ್ಮನ್ನು ತುಚ್ಛವಾಗಿ ಕಂಡರೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ರಾಜ್ಯ ಬಲಿಜ ಹಕ್ಕುಗಳ ಹೋರಾಟ ಸೇವಾ ಸಮಿತಿ ಎಚ್ಚರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಬಲಿಜ ಹಕ್ಕುಗಳ ಹೋರಾಟ ಸೇವಾ ಸಮಿತಿಯ ಪದಾಧಿಕಾರಿ/ ಸಂಖ್ಯಾ ಶಾಸ್ತ್ರ ಜ್ಯೋತಿಷಿ ಜಯಶ್ರೀನಿವಾಸನ್ ಗುರೂಜಿ, ರಾಜ್ಯದಲ್ಲಿ ಸುಮಾರು 40 ಲಕ್ಷ ಬಲಿಜ ಸಮುದಾಯದ ಜನರಿದ್ದಾರೆ. ಈ ಹಿಂದೆ 2ಎ ಮೀಸಲಾತಿ ಹೊಂದಿತ್ತು. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅಧಿಕಾರಾವಧಿಯಲ್ಲಿ ಏಕಾಏಕಿ 2ಎ ಮೀಸಲಾತಿ ಹಿಂತೆಗೆದುಕೊಂಡರು. ಆ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಈ ಹಿಂದಿನ ಅವಧಿಯಲ್ಲಿ ಬಲಿಜ ಸಮುದಾಯದ ವಿದ್ಯಾಭ್ಯಾಸಕ್ಕೆ 2ಎ ಮೀಸಲಾತಿ ನೀಡಿ, ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ 2ಎ ಮೀಸಲಾತಿ ನೀಡುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ, ಈಗ ಕೊಟ್ಟ ಮಾತನ್ನು ಮರೆತಿದ್ದಾರೆ ಎಂದು ಆರೋಪಿಸಿದರು.
ಕಳೆದ ವರ್ಷ ನಡೆದ ಉಪಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿದರೆ ನಿಮಗೆ ಪೂರ್ಣಪ್ರಮಾಣದ ಮೀಸಲಾತಿ ನೀಡುವುದಾಗಿ ಬಿಎಸ್ವೈ ಮಾತು ಕೊಟ್ಟಿದ್ದರು. ಈಗ ಆ ಮಾತನ್ನು ಮರೆತಿದ್ದಾರೆ. ಅಲ್ಲದೆ ಮಲತಾಯಿ ಧೋರಣೆ ತೋರುತ್ತಿದ್ದಾರೆ. ಹಲವು ಸಮುದಾಯಗಳಿಗೆ ನಿಗಮ, ಸಾಕಷ್ಟು ಅನುದಾನ ನೀಡುತ್ತಿರುವ ಯಡಿಯೂರಪ್ಪನವರು ಬಲಿಜ ಸಮುದಾಯಕ್ಕೆ 2ಎ ಮೀಸಲಾತಿ ನೀಡದಿರುವುದು ವಿಷಾಯನೀಯ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನೆರಡು ದಿನಗಳಲ್ಲಿ ಬಲಿಜ ಸಮುದಾಯದ ಮುಖಂಡರ ಸಭೆ ಕರೆದು ಈ ಬಗ್ಗೆ ಚರ್ಚೆ ಮಾಡುತ್ತೇವೆ. ಸರ್ಕಾರವು ಒಂದು ವಾರದೊಳಗೆ ನಿರ್ಧಾರಕ್ಕೆ ಬರಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ. ಸ್ವಾಮೀಜಿಗಳಿಂದ ಅಮರಣಾಂತ ಉಪವಾಸ ಕೈಗೊಳ್ಳುತ್ತೇವೆ ಎಂದು ಗುರೂಜಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಶಿರಡಿ ಇಂಟರ್ನ್ಯಾಷನಲ್ ಪೀಠಾಧ್ಯಕ್ಷ ಸಾಯಿ ರಾಮ್ ಪ್ರಸಾದ್ ಗುರೂಜಿ, ರಾಮೋಹಳ್ಳಿಯ ನಾಗದುರ್ಗ ಪೀಠಾಧ್ಯಕ್ಷ ಡಾ. ಶಕ್ತಿ ಬಾಲಮ್ಮ ಸ್ವಾಮೀಜಿ, ಕತ್ರಿಗುಪ್ಪೆ ಅಯ್ಯಪ್ಪ ದೇವಸ್ಥಾನ ಸಮಿತಿಯ ಪೀಠಾಧ್ಯಕ್ಷ ಎಂ.ಡಿ.ಸ್ವಾಮೀಜಿ ಭಾಗವಹಿಸಿ ಬಲಿಜ ಸಮುದಾಯಕ್ಕೆ ಪೂರ್ಣ ಪ್ರಮಾಣದ 2ಎ ಮೀಸಲಾತಿ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.