ಬೆಂಗಳೂರು:ಕೋವಿಡ್ ಕ್ರೌರ್ಯತೆ ಇಡೀ ದೇಶವನ್ನೇ ನಲುಗಿಸಿದೆ. ಕೋವಿಡ್ ಭೀಕರತೆಗೆ ಅದೆಷ್ಟೂ ಮಂದಿ ತಮ್ಮವರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಕೊರೊನಾ ಮಹಾಮಾರಿ ತಂದೆ, ತಾಯಿ, ಅಜ್ಜ, ಅಜ್ಜಿಯಂದಿರನ್ನು ಕಸಿದುಕೊಳ್ಳುವ ಮೂಲಕ ಅದೆಷ್ಟೋ ಮಕ್ಕಳನ್ನು ತಬ್ಬಲಿಯಾಗಿಸಿದೆ. ಅವರಿಗಾಗಿ ರಾಜ್ಯ ಸರ್ಕಾರ ಈಗಾಗಲೇ ಬಾಲ ಸೇವಾ ಯೋಜನೆ ಮೂಲಕ ಕೈಹಿಡಿದು ಮುನ್ನಡೆಸಲು ತಯಾರಿ ನಡೆಸುತ್ತಿದೆ.
ಕೋವಿಡ್ ಮಹಾಮಾರಿ ಅನೇಕ ಮಕ್ಕಳನ್ನು ತಬ್ಬಲಿಯಾಗಿಸಿದೆ. ಕೋವಿಡ್ ಅಟ್ಟಹಾಸಕ್ಕೆ ಅನಾಥರಾದ ಮಕ್ಕಳ ನೆರವಿಗೆ ರಾಜ್ಯ ಸರ್ಕಾರ ಮುಂದಾಗುತ್ತಿದೆ. ಅನಾಥ ಮಕ್ಕಳ ಆರೈಕೆ, ವಿದ್ಯಾಭ್ಯಾಸದ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಲಿದೆ. ಅದಕ್ಕಾಗಿಯೇ ಸರ್ಕಾರವು ಬಾಲ ಸೇವಾ ಯೋಜನೆ ಜಾರಿಗೊಳಿಸಿದೆ. ಅನಾಥ ಮಕ್ಕಳನ್ನು ಸಾಕಿ, ಸಲುಹಿ, ಒಳ್ಳೆಯ ವಿದ್ಯಾಭ್ಯಾಸ ನೀಡಿ ಓರ್ವ ಪ್ರಜ್ಞಾವಂತ ನಾಕರಿಕರನ್ನಾಗಿ ಮಾಡುವ ಪೋಷಕರ ಪಾತ್ರವನ್ನು ನಿಭಾಯಿಸಲಿದೆ.
ಕೋವಿಡ್ಗೆ ಅನಾಥರಾದ ಮಕ್ಕಳೆಷ್ಟು?
ಸರ್ಕಾರ ನೀಡಿರುವ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಈವರೆಗೆ 39 ಮಕ್ಕಳು ಕೋವಿಡ್ನಿಂದ ಅನಾಥರಾಗಿದ್ದಾರೆ. ಈ ಪೈಕಿ 20 ಮಂದಿ ಒಡಹುಟ್ಟಿದ ಮಕ್ಕಳಾಗಿದ್ದರೆ, 19 ಒಬ್ಬಂಟಿ ಮಕ್ಕಳು ತಬ್ಬಲಿಗಳಾಗಿದ್ದಾರೆ.
ಇಲ್ಲಿವರೆಗೆ ರಾಯಚೂರು 4, ಬಾಗಲಕೋಟೆ ಜಿಲ್ಲೆಯಲ್ಲಿ 3 ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ. ಅದೇ ರೀತಿ ಬೆಳಗಾವಿ, ಗದಗ, ಹಾಸನ, ಬೆಂಗಳೂರು ನಗರ, ಮೈಸೂರು, ರಾಮನಗರದಲ್ಲಿ ತಲಾ 2, ಬೀದರ್ 3, ದ.ಕನ್ನಡ 3, ಧಾರವಾಡ 3, ಕೊಡಗು 3, ಕೋಲಾರದಲ್ಲಿ 3 ಮಕ್ಕಳು, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾವೇರಿ, ಮಂಡ್ಯದಲ್ಲಿ ತಲಾ 1ರಂತೆ ಮಕ್ಕಳು ಅನಾಥರಾಗಿರುವುದು ವರದಿಯಾಗಿದೆ.
ತಬ್ಬಲಿ ಮಕ್ಕಳಿಗೆ ಬಾಲ ಸೇವಾ ಯೋಜನೆಯ ಆಸರೆ:
ತಬ್ಬಲಿಯಾದ ಈ ಮಕ್ಕಳಿಗೆ ರಾಜ್ಯ ಸರ್ಕಾರ ಈಗಾಗಲೇ ಘೋಷಣೆ ಮಾಡಿರುವ ಬಾಲ ಸೇವಾ ಯೋಜನೆ ಆಸರೆ ಒದಗಿಸಲಿದೆ. ಈ ವಿಶೇಷ ಯೋಜನೆ ಮೂಲಕ ಅನಾಥ ಮಕ್ಕಳ ಕೈ ಹಿಡಿಯುವ ಪ್ರಕ್ರಿಯೆ ಪ್ರಾರಂಭಿಸಿದೆ.
ತಂದೆ ತಾಯಿ ಕಳೆದುಕೊಂಡ ಮಕ್ಕಳಿಗೆ ಘೋಷಣೆ ಮಾಡುವವರಿಗೆ ಮಾಸಿಕ 3,500 ರೂ. ನೀಡುವುದು. 10 ವರ್ಷದೊಳಗಿನ ಮಕ್ಕಳ ಶಿಕ್ಷಣಕ್ಕೆ ಸರ್ಕಾರಿ ವಸತಿ ಶಾಲೆಗಳಲ್ಲಿ ಶಿಕ್ಷಣ ಕಲ್ಪಿಸುವುದು ಹಾಗೂ 21 ವರ್ಷ ಪೂರೈಸಿರುವ ತಂದೆ ತಾಯಿಗಳನ್ನು ಕಳೆದುಕೊಂಡ ಹೆಣ್ಣು ಮಕ್ಕಳಿಗೆ 1 ಲಕ್ಷ ರೂ. ಸಹಾಯ ಧನವನ್ನು ನೇರವಾಗಿ ಅವರ ಅಕೌಂಟ್ ಗೆ ತಲುಪಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕ್ರಮ ಕೈಗೊಳ್ಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಯೋಜನೆ ಅನುಷ್ಠಾನದಲ್ಲಿ ಯಾವುದೇ ರೀತಿಯ ಮಧ್ಯವರ್ತಿಗಳ ಹಾವಳಿಯಾಗದಂತೆ ಕ್ರಮ ವಹಿಸಲು ತೀರ್ಮಾನಿಸಲಾಗಿದೆ. ಕೋವಿಡ್‌ನಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳ ರಕ್ಷಣೆಗೆ ರಾಜ್ಯ ಸರ್ಕಾರ ನೋಡಲ್ ಅಧಿಕಾರಿಯನ್ನು ನೇಮಕ ಮಾಡಿದೆ. ಮಕ್ಕಳ ಪಾಲನೆ ಹಾಗೂ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಲು ಸರ್ಕಾರ ನಿರ್ಧರಿಸಿದೆ. ಮಕ್ಕಳ ದತ್ತು ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಕಾನೂನು ಉಲ್ಲಂಘನೆ ಆಗದಂತೆ ಮುತುವರ್ಜಿ ವಹಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕ್ರಮ ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಬಾಲ ಸೇವಾ ಯೋಜನೆಯ ಬಗ್ಗೆ ಪ್ರತಿ ಗ್ರಾಮ ಮಟ್ಟದಲ್ಲಿ ಎಲ್ಲರಿಗೆ ಅರಿವು ಮೂಡಿಸಲು ಎಲ್ಲ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ. ಅನಾಥ ಮಕ್ಕಳ ಕ್ಷೇಮ ಹಾಗೂ ಸುರಕ್ಷತೆಯ ನಿಟ್ಟಿನಲ್ಲಿ ಅಧಿಕಾರಿಗಳು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದಾರೆ. ಸದ್ಯ ಎಲ್ಲ ಮಕ್ಕಳು ತಮ್ಮ ಸಂಬಂಧಿಕರ ಆಶ್ರಯದಲ್ಲಿದ್ದು ಸುರಕ್ಷಿತರಾಗಿದ್ದಾರೆ. ಈ ಮಕ್ಕಳ ಆರೈಕೆ ಮೇಲೆ ಸಿಡಬ್ಲ್ಯೂಸಿ ಮೂಲಕ ನಿಗಾ ಇಡಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಕೋವಿಡ್ 3ನೇ ಸಂಭಾವ್ಯ ಅಲೆ : ಆರೈಕೆ ಕೇಂದ್ರ ಮುಚ್ಚಬೇಡಿ ಎಂದ ಹೈಕೋರ್ಟ್